ನವದೆಹಲಿ, ಮಾ 22 (DaijiworldNews/MS): ಮೇಕೆದಾಟು ಯೋಜನೆಗಾಗಿ ಮೂರನೇ ಬಾರಿ, ರಾಜ್ಯದ ಹಿತದೃಷ್ಟಿಯಿಂದ ತಮಿಳುನಾಡು ಕಡೆಗೆ ಪಾದಯಾತ್ರೆ ಮಾಡುವುದು ಯಾವಾಗ ಎಂದು ಬಿಜೆಪಿಯೂ ಕಾಂಗ್ರೆಸ್ ಪಕ್ಷವನ್ನು ಪ್ರಶ್ನಿಸಿದೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ ಘಟಕವೂ, ಮೇಕೆದಾಟು ಯೋಜನೆಯನ್ನು ಜಾರಿಗೊಳಿಸಲು ಬಿಡುವುದಿಲ್ಲ ಎಂದು ತಮಿಳುನಾಡು ಸರ್ಕಾರ ವಿಧಾನಸಭೆಯಲ್ಲಿ ನಿರ್ಣಯ ತೆಗೆದುಕೊಂಡಿದೆ.ತಮ್ಮದೇ ಮೈತ್ರಿ ಪಕ್ಷದ ಸರ್ಕಾರ ತೆಗೆದುಕೊಂಡಿರುವ ನಿರ್ಧಾರದ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಈಗ ಏಕೆ ಮೌನವಾಗಿದ್ದಾರೆ?ತಮಿಳುನಾಡಿಗೆ ಪಾದಯಾತ್ರೆ ಮಾಡುವುದೆಂದು? ಎಂದು ಕುಹಕವಾಡಿದೆ.
ರಾಹುಲ್ ಗಾಂಧಿ ತಮಿಳುನಾಡು ಸಿಎಂ ಸ್ಟ್ಯಾಲಿನ್ ಅವರ ಜೊತೆ ಇತ್ತೀಚೆಗೆ ವೇದಿಕೆ ಹಂಚಿಕೊಂಡಿದ್ದರು.ಆದರೆ ಅಧಿಕಾರದ ದಾಹದಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಕರ್ನಾಟಕದ ಪರವಾಗಿ ಮಾತನಾಡಲು ಹಿಂಜರಿದರು. ಡಿಕೆಶಿಯವರೇ, ಇಲ್ಲಿ ಪಾದಯಾತ್ರೆ ಮಾಡುವ ಬದಲು ತಮಿಳುನಾಡಿನ ಕಡೆಗೆ ಪಾದ ಬೆಳೆಸಿದ್ದರೆ ಏನಾದರೂ ಲಾಭವಾಗುತ್ತಿತ್ತಲ್ಲವೇ ಎಂದು ಪ್ರಶ್ನಿಸಿದೆ.
ರಾಜಕೀಯ ಲಾಭಕ್ಕಾಗಿ ಡಿ.ಕೆ ಶಿವಕುಮಾರ್ ಅವರು ಒಂದಲ್ಲ ಎರಡು ಬಾರಿ ಮೇಕೆದಾಟು ಪಾದಯಾತ್ರೆ ಮಾಡಿದ್ದಾರೆ. ಎರಡು ಬಾರಿ ಸುಳ್ಳಿನಜಾತ್ರೆ ಮಾಡಿ ಅಭ್ಯಾಸವಿರುವ ಡಿಕೆಶಿ ಅವರಿಗೆ ಮತ್ತೊಂದು ಬಾರಿ ಪಾದಯಾತ್ರೆ ಮಾಡುವುದು ಕಷ್ಟವೇನಿಲ್ಲ.ಮೂರನೇ ಬಾರಿ, ರಾಜ್ಯದ ಹಿತದೃಷ್ಟಿಯಿಂದ ತಮಿಳುನಾಡು ಕಡೆಗೆ ಪಾದಯಾತ್ರೆ ಮಾಡಿ ಎಂದು ಬಿಜೆಪಿ ವ್ಯಂಗ್ಯವಾಗಿ ಸಲಹೆ ನೀಡಿದೆ.