ನವದೆಹಲಿ, ಮಾ 22 (DaijiworldNews/DB): ಎರಡು ತಿಂಗಳ ಶಿಶುವೊಂದು ಮೈಕ್ರೋವೇವ್ ಓವನ್ ನೊಳಗೆ ಕೊಲೆಯಾದ ರೀತಿಯಲ್ಲಿ ಪತ್ತೆಯಾದ ಘಟನೆ ದಕ್ಷಿಣ ನವದೆಹಲಿಯ ಚಿರಾಗ್ ದಿಲ್ಲಿ ಪ್ರದೇಶದಲ್ಲಿ ಸೋಮವಾರ ನಡೆದಿದೆ. ಪ್ರಾಥಮಿಕ ತನಿಖೆ ವೇಳೆ ಶಿಶುವಿನ ತಾಯಿಯೇ ಶಂಕಿತ ಆರೋಪಿ ಎಂಬುದಾಗಿ ಮೇಲ್ನೋಟಕ್ಕೆ ಸಾಬೀತಾಗಿದೆ.
ಅನನ್ಯಾ ಎಂಬ ಹೆಸರಿನ ಶಿಶು ಕೊಲೆಯಾದ ರೀತಿಯಲ್ಲಿ ಮೈಕ್ರೋವೇವ್ ಓವನ್ ನೊಳಗೆ ಪತ್ತೆಯಾದವಳು. ಘಟನೆಯು ಸೋಮವಾರ ಮಧ್ಯಾಹ್ನ 3.15ರ ಸುಮಾರಿಗೆ ಘಟಿಸಿರಬಹುದು ಎಂದು ಅಂದಾಜಿಸಲಾಗಿದೆ. ಅಪರಿಚಿತ ವ್ಯಕ್ತಿಯ ಮೇಲೆ ಕೊಲೆ ಕೇಸ್ ದಾಖಲಿಸಲಾಗಿದ್ದು, ಘಟನೆಗೆ ಕಾರಣವೇನೆಂದು ಎಲ್ಲಾ ಸಾಧ್ಯತೆಗಳ ಅಂಶಗಳ ಮೇಲೆ ಪತ್ತೆ ಹಚ್ಚಲಾಗುತ್ತಿದೆ. ಶಿಶುವಿನ ಹೆತ್ತವರಾದ ಗುಲ್ಶಾನ್ ಕೌಶಿಕ್ ಮತ್ತು ಡಿಂಪಲ್ ಕೌಶಿಕ್ ಅವರನ್ನು ಈಗಾಗಲೇ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಡಿಸಿಪಿ (ದಕ್ಷಿಣ) ಬೆನಿಟಾ ಮೇರಿ ಜೈಕರ್ ತಿಳಿಸಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ನೀಡಿದ ಮಾಹಿತಿ ಪ್ರಕಾರ, ಶಿಶುವಿನ ತಾಯಿಯೇ ಶಂಕಿತ ಆರೋಪಿ ಎಂಬುದಾಗಿ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಹೆಣ್ಣು ಮಗು ಹುಟ್ಟಿದ್ದಕ್ಕೆ ಆಕೆ ಅಸಮಾಧಾನಗೊಂಡಿದ್ದಳು ಮತ್ತು ಈ ಹಿನ್ನೆಲೆಯಲ್ಲಿ ಕೃತ್ಯ ಎಸಗಿದ್ದಾಳೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದಿದ್ದಾರೆ.
ಅನನ್ಯಾ ಜನವರಿಯಲ್ಲಿ ಜನಿಸಿದ್ದಳು. ಅಲ್ಲಿಂದಲೇ ತಾಯಿ ಅಸಮಾಧಾನಕ್ಕೆ ಒಳಗಾಗಿದ್ದಳು. ಅಲ್ಲದೆ ಇದೇ ಕಾರಣಕ್ಕಾಗಿ ಆಕೆ ತನ್ನ ಪತಿಯೊಂದಿಗೂ ಜಗಳವಾಡಿದ್ದಳು ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ದಂಪತಿಗೆ ಈಗಾಗಲೇ ನಾಲ್ಕು ವರ್ಷದ ಪುತ್ರನಿದ್ದಾನೆ.
ಆಸುಪಾಸಿನ ಮನೆಯವರು ತಿಳಿಸಿದ ಮಾಹಿತಿ ಪ್ರಕಾರ, ಗುಲ್ಕಾನ್ ಅತ್ತೆ ಕರೆದಾಗ ಆಕೆ ಮನೆಯೊಳಗೆ ಬಾಗಿಲು ಹಾಕಿಕೊಂಡಿದ್ದಳು. ತುಂಬಾ ಸಮಯದವರೆಗೂ ಬಾಗಿಲು ತೆಗೆಯದ ಕಾರಣ ನಾವು ಕಿಟಕಿ ಬಾಗಿಲುಗಳನ್ನು ಒಡೆದ ಮನೆಯೊಳಗೆ ನುಗ್ಗಿದೆವು. ಆಕೆ ಪ್ರಜ್ಞಾಹೀನಾವಸ್ಥೆಯಲ್ಲಿ ಬಿದ್ದಿದ್ದಳು. ಆಕೆಯ ಪಕ್ಕದಲ್ಲಿ ಪುತ್ರ ಇದ್ದ. ಆದರೆ ಎರಡು ತಿಂಗಳ ಶಿಶು ಅನನ್ಯಾ ಅಲ್ಲಿರಲಿಲ್ಲ. ಬಳಿಕ ಮನೆಯ ಎಲ್ಲಾ ಕಡೆ ಮಗುವಿಗಾಗಿ ಹುಡುಕಾಡಿದಾಗ ಮೈಕ್ರೋವೇವ್ ಓವನ್ ನಲ್ಲಿ ಮಗುವಿನ ಶವ ಪತ್ತೆಯಾಗಿತ್ತು ಎಂದು ತಿಳಿಸಿದ್ದಾರೆ.
ಘಟನೆ ನಡೆಯುವ ವೇಳೆ ಮಗುವಿನ ತಂದೆ ಮನೆಯಲ್ಲಿ ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.