ಬೆಂಗಳೂರು, ಮಾ 21 (DaijiworldNews/HR): ಉನ್ನತ ಶಿಕ್ಷಣವನ್ನು ಉಳ್ಳವರಿಗೆ ಒತ್ತೆ ಇಟ್ಟ ಕೇಂದ್ರ ಮತ್ತು ರಾಜ್ಯ ಸರಕಾರಗಳು ಎಸಗಿದ ಪಾಪಕ್ಕೆ ಮುಗ್ಧ ವಿದ್ಯಾರ್ಥಿ ನವೀನ್ ಬಲಿ ಆಗಿದೆ. ರಾಜಕಾರಣಿಗಳು, ಶ್ರೀಮಂತರಿಗೆ ಉನ್ನತ ಶಿಕ್ಷಣವು ದುಡ್ಡು ಸಂಗ್ರಹ ಮಾಡುವ ಹುಂಡಿಯಾಗಿದೆ. ಇದರಲ್ಲಿ ಅನುಮಾನವೇ ಇಲ್ಲ ಎಂದು ಆಡಳಿತದಲ್ಲಿರುವ ಸರ್ಕಾರದ ವಿರುದ್ದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ದೂರದ ಉಕ್ರೇನ್ ದೇಶದಲ್ಲಿ ಜೀವ ಚೆಲ್ಲಿ ಹುಟ್ಟಿದೂರಿನಲ್ಲಿ ನಿಶ್ಚಲವಾಗಿ ಮಲಗಿದ್ದ ನವೀನ್ ಭಾರತದ ಆತ್ಮಸಾಕ್ಷಿಗೆ ಎದುರಾಗಿರುವ ದೊಡ್ಡ ಪ್ರಶ್ನೆ. ವಿದ್ಯೆ ಹೆಸರಿನಲ್ಲಿ ದಂಧೆ ನಡೆಸುವ ದುರಾಸೆಗೂ ಒಂದು ಸವಾಲು. ಹಾಗಾದರೆ, ಇನ್ನೆಷ್ಟು ನವೀನರು ಬಲಿ ಆಗಬೇಕು? ಎಂದು ಪ್ರಶ್ನಿಸಿದ್ದಾರೆ.
ಧನದಾಹಕ್ಕೆ ಕಡಿವಾಣ ಹಾಕಿ ಎಲ್ಲರಿಗೂ ಮೆಡಿಕಲ್ ಸೀಟು ಕೊಡಿಸುವ ಉದ್ದೇಶದಿಂದ ಜಾರಿಗೆ ಬಂದ ನೀಟ್ ವ್ಯವಸ್ಥೆ ಸಂಪೂರ್ಣ ವಿಫಲವಾಗಿದೆ. ನವೀನ್ ಸಾವಿನಿಂದ ಜ್ಞಾನೋದಯ ಆಗಿದೆ ಎನ್ನುವ ಕರ್ನಾಟಕದ ಮುಖ್ಯಮಂತ್ರಿ ಅವರು ವೈದ್ಯ ಶಿಕ್ಷಣ ಶುಲ್ಕ ಕಡಿಮೆ ಮಾಡುವ ಹೇಳಿಕೆ ನೀಡುತ್ತಾರೆ. ಆದರೆ, ನೀಟ್ ವಿರುದ್ಧ ಚಕಾರ ಎತ್ತುತ್ತಿಲ್ಲ, ಯಾಕೆ? ಎಂದಿದ್ದಾರೆ.
ಖಾಸಗಿ ಕಾಲೇಜುಗಳಲ್ಲಿ ವೈದ್ಯ ಶಿಕ್ಷಣ ದುಬಾರಿ ಎಂದು ಸ್ವತಃ ಮುಖ್ಯಮಂತ್ರಿಯೇ ಒಪ್ಪಿಕೊಂಡಿದ್ದಾರೆ. ಹಾಗಾದರೆ, ಅಂಥ ಕಾಲೇಜುಗಳಿಗೆ ಶಕ್ತಿ ತುಂಬುತ್ತಿರುವುದು ಏಕೆ! ಸರಕಾರಿ ವೈದ್ಯ ಕಾಲೇಜುಗಳಲ್ಲಿ ಕನ್ನಡದ ಮಕ್ಕಳಿಗೆ ಸೀಟು ಸಿಗುತ್ತಿಲ್ಲ. ಟ್ಯೂಷನ್ ಅಂಗಡಿಗಳಿಗೆ ಲಕ್ಷ ಲಕ್ಷ ಕಟ್ಟುವುದು ಬಡ, ಮಧ್ಯಮ ವರ್ಗದ ಮಕ್ಕಳಿಗೆ ಸಾಧ್ಯವಿಲ್ಲ ಎಂದರು.
ಮೂತಿಗೆ ತುಪ್ಪ ಸವರುವಂತೆ ವೈದ್ಯ ಶಿಕ್ಷಣದ ಶುಲ್ಕವನ್ನು ಅಲ್ಪಸ್ವಲ್ಪ ಕಡಿಮೆ ಮಾಡಿ ಸದ್ಯಕ್ಕೆ ಪಾರಾಗುವುದಲ್ಲ. ಉಕ್ರೇನ್ ಮತ್ತು ನವೀನ್ ಸಾವಿನಿಂದ ಪಾಠ ಕಲಿತು ಅದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಹಾಗೂ ನೀಟ್ ನಿಂದ ಹೊರಬರಲು ವಿಧಾನ ಮಂಡಲದಲ್ಲಿ ನಿರ್ಣಯ ಕೈಗೊಳ್ಳಬೇಕು ಎಂದಿದ್ದಾರೆ.
ಇನ್ನು ನೀಟ್ ಮೂಲಕ ವೈದ್ಯಕೀಯ ಸೀಟು ಸಿಗದೇ ಉಕ್ರೇನ್ ಗೆ ಹೋಗಿ ಉಸಿರು ಚೆಲ್ಲಿದ ನವೀನ್ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ನೀಟ್ ವ್ಯವಸ್ಥೆಗೆ ಚರಮಗೀತೆ ಹಾಡಬೇಕು ಎಂದು ಹೇಳಿದ್ದಾರೆ.