ಹಾವೇರಿ, ಮಾ 21 (DaijiworldNews/HR): ಉಕ್ರೇನ್ನಲ್ಲಿ ರಷ್ಯಾ ಪಡೆಗಳು ನಡೆಸಿದ ಬಾಂಬ್ ದಾಳಿಯಲ್ಲಿ ಇದೇ 2ರಂದು ಮೃತಪಟ್ಟಿರುವ ಹಾವೇರಿ ಜಿಲ್ಲೆಯ ಚಳಗೇರಿ ಗ್ರಾಮದ ನವೀನ್ ಗ್ಯಾನಗೌಡರ ಅವರ ಮೃತದೇಹ 20 ದಿನಗಳ ಬಳಿಕ ಸ್ವಗ್ರಾಮ ರಾಣಿಬೆನ್ನೂರು ತಾಲೂಕು ಚಳಗೇರಿಗೆ ಆಗಮಿಸಿದ್ದು, ಕುಟುಂಬಸ್ಥರರಿಂದ ಪೂಜೆ ಸಲ್ಲಿಸಿದ ಬಳಿಕ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ನವೀನ್ ಪಾರ್ಥಿವ ಶರೀರವನ್ನು ಚಳಗೇರಿಯ ನಿವಾಸಕ್ಕೆ ತಂದು ವೀರಶೈವ ಲಿಂಗಾಯದ ಸಂಪ್ರದಾಯದಂತೆ ಪೂಜೆ ನೆರವೇರಿಸಲಾಗುತ್ತಿದ್ದು, ಬಳಿಕ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗುತ್ತಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಳಗೇರಿಗೆ ಆಗಮಿಸಿ ಅಂತಿಮ ದರ್ಶನ ಪಡೆಯಲಿದ್ದು, ಸುಮಾರು 3 ಗಂಟೆಗಳ ಕಾಲ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ನೀಡಲು ನಿರ್ಧರಿಸಲಾಗಿದೆ.
ನವೀನ್ ಅಂತಿಮ ದರ್ಶನಕ್ಕೆ ಗಣ್ಯರು ಮತ್ತು ಸಾರ್ವಜನಿಕರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದ್ದು, ಸುಮಾರು 200 ಪೊಲೀಸರನ್ನು ನಿಯೋಜಿಸಲಾಗುತ್ತಿದೆ.
ಇನ್ನು ನವೀನ ಮೃತದೇಹ ಕಂಡು ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದ್ದು, ಗ್ರಾಮದಲ್ಲಿ ಶೋಕದ ವಾತಾವಣ ನಿರ್ಮಾಣಗೊಂಡಿದೆ.
ನವೀನ್ ದೇಹದಾನಕ್ಕೆ ಪೋಷಕರು ನಿರ್ಧರಿಸಿದ್ದು, ಮೃತದೇಹದ ಮೆರವಣಿಗೆ ಬಳಿಕ ದಾವಣಗೆರೆಯ ಎಸ್.ಎಸ್. ಮೆಡಿಕಲ್ ಕಾಲೇಜಿಗೆ ನವೀನ್ ದೇಹವನ್ನು ಹಸ್ತಾಂತರ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ.