ನವದೆಹಲಿ, ಮಾ 21 (DaijiworldNews/HR): ರಷ್ಯಾವು ಉಕ್ರೇನ್ ಮೇಲೆ ದಾಳಿ ಮಾಡಿದ ಬಳಿಕ ಉಕ್ರೇನ್ನಲ್ಲಿರುವ ಭಾರತೀಯರನ್ನು ಭಾರತಕ್ಕೆ ವಾಪಾಸ್ ಕರೆತರಲಾಗಿದ್ದು, ಇದೀಗ ಉಕ್ರೇನ್ನಿಂದ ಹಿಂದಿರುಗಿದ ವಿದ್ಯಾರ್ಥಿಗಳು ಭಾರತದಲ್ಲಿನ ವೈದ್ಯಕೀಯ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಪಡೆಯಲು ಅವಕಾಶ ನೀಡಬೇಕು ಎಂದು ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.
ಉಕ್ರೇನ್ನಿಂದ ವಾಪಾಸ್ ಬಂದ ಎರ್ನಾಕುಲಂನ ವಿದ್ಯಾರ್ಥಿನಿ ಅನಿಖಾ ಮೆರಿನ್ ಥಾಮಸ್ ಭಾರತದಲ್ಲಿನ ವೈದ್ಯಕೀಯ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಪಡೆಯಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಮಾರ್ಚ್ 4 ರಂದು ಯುದ್ಧದಿಂದ ಹಾನಿಗೊಳಗಾದ ಉಕ್ರೇನ್ನಿಂದ ಕೀವ್ನ ಬೊಗೊಲೊಮೆಟ್ಸ್ ನ್ಯಾಷನಲ್ ಯೂನಿವರ್ಸಿಟಿಯ ಮೂರನೇ ವರ್ಷದ ವಿದ್ಯಾರ್ಥಿನಿ ಅನಿಖಾ ಹಿಂದಿರುಗಿದ್ದು, ದೇಶದ ವೈದ್ಯಕೀಯ ಕಾಲೇಜಿಗೆ ನಮ್ಮನ್ನು ಸೇರಿಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.
ಇನ್ನು ವಿಶ್ವವಿದ್ಯಾಲಯವು ನಮಗೆ ಆನ್ಲೈನ್ ತರಗತಿಗಳನ್ನು ನೀಡುತ್ತಿದೆ. ಆದರೆ ನಮ್ಮ ಶಿಕ್ಷಕರು ಬಂಕರ್ಗಳಿಂದ ಆನ್ಲೈನ್ ಸೆಷನ್ಗಳಿಗೆ ಹಾಜರಾಗುತ್ತಿರುವುದರಿಂದ ಮುಂದೆ ಏನಾಗುತ್ತದೆ ಎಂಬುದರ ಕುರಿತು ಯಾವುದೇ ಭರವಸೆ ಇಲ್ಲ. ಮುಂದಿನ ದಿನಗಳಲ್ಲಿ ನಾವು ಉಕ್ರೇನ್ಗೆ ಹಿಂತಿರುಗಲು ಸಾಧ್ಯವಾಗುವುದಿಲ್ಲ. ಆ ಕಾರಣದಿಂದಾಗಿ ನಮ್ಮನ್ನು ದೇಶದ ವೈದ್ಯಕೀಯ ಕಾಲೇಜುಗಳಿಗೆ ಸೇರಿಸಲು ನಾವು ಇಲ್ಲಿನ ಅಧಿಕಾರಿಗಳನ್ನು ವಿನಂತಿಸುತ್ತೇವೆ ಎಂದಿದ್ದಾರೆ.