ಬೆಂಗಳೂರು, ಮಾ 21 (DaijiworldNews/MS): ಉಕ್ರೇನ್ನಲ್ಲಿ ರಷ್ಯಾ ಪಡೆಗಳು ನಡೆಸಿದ ಬಾಂಬ್ ದಾಳಿಯಲ್ಲಿ ಇದೇ 2ರಂದು ಮೃತಪಟ್ಟಿರುವ ಹಾವೇರಿ ಜಿಲ್ಲೆಯ ಚಳಗೇರಿ ಗ್ರಾಮದ ನವೀನ್ ಗ್ಯಾನಗೌಡರ ಅವರ ಮೃತದೇಹ 20 ದಿನಗಳ ಬಳಿಕ ತಾಯ್ನಾಡನ್ನು ಸೇರಿದೆ.
ಇಂದು ನಸುಕಿನಲ್ಲಿ ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನವೀನ್ ಅವರ ಮೃತದೇಹಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ದಲ್ಲಿ ಗೌರವ ಪೂರ್ವಕ ನಮನ ಸಲ್ಲಿಸಿದರು. ಈಸಂದರ್ಭದಲ್ಲಿ ಆರೋಗ್ಯ ಸಚಿವ ಡಾ. ಕೆ ಸುಧಾಕರ್, ಸಂಸದ ಶಿವಕುಮಾರ ಉದಾಸಿ, ಶಾಸಕರಾದ ಅರುಣ್ ಕುಮಾರ್, ಸಲೀಂ ಮುಹಮದ್ ಮತ್ತು ಇತರರು ಉಪಸ್ಥಿತರಿದ್ದರು.
ಬೆಂಗಳೂರಿನಿಂದ ಈಗಾಗಲೇ ನವೀನ್ ಗ್ರಾಮಕ್ಕೆ ಪಾರ್ಥಿವ ಶರೀರ ಕೊಂಡೊಯ್ಯೊಲಾಗುತ್ತಿದ್ದು, ಬೆಳಗ್ಗೆ 10 ಗಂಟೆ ಸುಮಾರಿಗೆ ಗ್ರಾಮವನ್ನು ತಲುಪಲಿದೆ.ಮನೆ ಮಗನನ್ನು ಕಳೆದುಕೊಂಡಿರುವ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಈ ನಡುವೆ ಕುಟುಂಬಸ್ಥರು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ಮೃತ ದೇಹವನ್ನು ದಾವಣಗೆರೆ ಎಸ್ ಎಸ್ ಮೆಡಿಕಲ್ ಕಾಲೇಜು ಹಸ್ತಾಂತರ ಮಾಡಲು ನಿರ್ಧರಿಸಿದ್ದಾರೆ.