ತುಮಕೂರು, ಮಾ 20 (DaijiworldNews/HR): ಲಾಭ, ನಷ್ಟದ ಲೆಕ್ಕಾಚಾರ ಹಾಕಿ, ಕೆಎಸ್ಆರ್ಟಿಸಿ ಬಸ್ ಗಳ ಸಂಖ್ಯೆಯನ್ನು ರಾಜ್ಯ ಸರ್ಕಾರ ಕಡಿಮೆ ಮಾಡಿದ್ದು, ಪ್ರತಿ ಹಳ್ಳಿಗೂ ಕೆಎಸ್ಆರ್ಟಿಸಿ ಬಸ್ ವ್ಯವಸ್ಥೆ ಕಲ್ಪಿಸಬೇಕು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.
ತುಮಕೂರಿನ ಪಳವಳ್ಳಿ ಖಾಸಗಿ ಬಸ್ ಅಪಘಾತ ಸಂಬಂಧ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಮಾತನಾಡಿದ ಅವರು, ಕೆಎಸ್ಆರ್ಟಿಸಿ ಬಸ್ ಗಳ ಸಂಖ್ಯೆಯನ್ನೇ ಕಡಿಮೆ ಮಾಡಿದ್ದಾರೆ. ಕೆಎಸ್ಆರ್ಟಿಸಿ ನ್ಯೂನ್ಯತೆಗಳನ್ನು ಸರಿಪಡಿಸಿ. ಲಾಭ ನಷ್ಟದ ಯೋಚನೆ ಮಾಡದೆ ಪ್ರತಿ ಹಳ್ಳಿಗೂ ಬಸ್ ವ್ಯವಸ್ಥೆ ಕಲ್ಪಿಸಿ ಎಂದು ಆಗ್ರಹಿಸಿದ್ದಾರೆ.
ಇನ್ನು ಬೆಂಗಳೂರಿನಲ್ಲಿ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ, ಸರ್ಕಾರ ಗಮನ ಹರಿಸಬೇಕು. ಕೊರೊನಾ ಅನಾಹುತ, ಮುಷ್ಕರದಿಂದ ಸಾರಿಗೆ ಇಲಾಖೆ ನೌಕರರನ್ನು ವಜಾಗೊಳಿಸಿದೆ. ಗ್ರಾಮೀಣ ಪ್ರದೇಶಕ್ಕೆ ಸಾರಿಗೆ ಸಂಪರ್ಕವಿಲ್ಲದಂತಾಗಿದೆ ಎಂದು ವಾಗ್ದಾಳಿ ನಡೆಸಿದರು.
ರಾಜ್ಯ ಸರ್ಕಾರವೇ ಬಸ್ ಅಪಘಾತದಲ್ಲಿ ಗಾಯಗೊಂಡ ಗಾಯಾಳುಗಳ ಸಂಪೂರ್ಣ ಚಿಕಿತ್ಸಾ ವೆಚ್ಚ ಭರಿಸಬೇಕು. ಸುರಕ್ಷತಾ ಕ್ರಮ ಕೈಗೊಳ್ಳಬೇಕುಯ ಖಾಸಗಿ ಬಸ್ ಗಳ ಪರ್ಮಿಟ್ ರದ್ದು ಮಾಡುವುದು ಪರಿಹಾರವಲ್ಲ ಎಂದಿದ್ದಾರೆ.