ಜಮ್ಮು, ಮಾ 20 (DaijiworldNews/DB): ಪಾಕಿಸ್ತಾನ ಮತ್ತು ಉಗ್ರಗಾಮಿತ್ವವೇ ಜಮ್ಮು ಕಾಶ್ಮೀರದಲ್ಲಿ ನಡೆದ ಎಲ್ಲಾ ಘಟನೆಗಳಿಗೆ ಕಾರಣ ಎಂದು ಕಾಂಗ್ರೆಸ್ ನ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಹೇಳಿದ್ದಾರೆ.
ಜಮ್ಮುವಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಮ್ಮು ಕಾಶ್ಮೀರದಲ್ಲಿ ಪಾಕಿಸ್ತಾನ ಮತ್ತು ಉಗ್ರಗಾಮಿತ್ವದಿಂದಾಗಿ ಘಟನೆಗಳು ನಡೆಯುತ್ತಿವೆ ಎಂದರು. ’ದಿ ಕಾಶ್ಮೀರ್ ಫೈಲ್ಸ್’ ಚಿತ್ರ ಬಿಡುಗಡೆಯಾದ ಬಳಿಕ ನಡೆಯುತ್ತಿರುವ ಪರ-ವಿರೋಧ ಚರ್ಚೆಗಳ ಬೆನ್ನಲ್ಲೇ ಅವರು ಈ ಹೇಳಿಕೆ ನೀಡಿದ್ದಾರೆ.
ಧರ್ಮ, ಜಾತಿ ಆಧಾರಗಳಲ್ಲಿ ವಿಭಜನೆ ಮಾಡುವ ಕೆಲಸವನ್ನು ರಾಜಕೀಯ ಪಕ್ಷಗಳು ಮಾಡಬಾರದು. ಅಂತಹ ಕೆಲಸ ಯಾರೇ ಮಾಡಿದರೂ ಅದು ಕ್ಷಮೆಗೆ ಅರ್ಹವಲ್ಲ. ಸ್ವತಃ ನಾನೇ ಮಾಡಿದರೂ ಅದು ಅಕ್ಷಮ್ಯ. ಜಾತಿ, ಧರ್ಮ ಎಂದು ಹೊಡೆದಾಡಿಕೊಳ್ಳದೆ ಎಲ್ಲರೂ ಒಗ್ಗಟ್ಟಾಗಿ ಬದುಕುವುದನ್ನು ಕಲಿಯಬೇಕು. ಎಲ್ಲರಿಗೂ ಸಮಾನ ನ್ಯಾಯ ಸಿಗಬೇಕು ಎಂದು ತಿಳಿಸಿದರು.