ಹುಬ್ಬಳ್ಳಿ, ಮಾ 20 (DaijiworldNews/DB): ಬಿಜೆಪಿಯ ಕೆಲವು ಮುಖಂಡರು ಅವರ ಪಕ್ಷಕ್ಕೆ ಬರುವಂತೆ ನನ್ನನ್ನು ಆಹ್ವಾನಿಸಿರುವುದು ನಿಜ. ಆದರೆ ಈ ಬಗ್ಗೆ ನಾನು ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿದ ಅವರು, ಬಿಜೆಪಿಗೆ ಸೇರುವುದೇ ಬೇಡವೇ ಎಂಬ ಬಗ್ಗೆ ಮುಂದಿನ ದಿನಗಳಲ್ಲಿ ಯೋಚಿಸಿ ತೀರ್ಮಾನಿಸುತ್ತೇನೆ ಎಂದರು.
ನಾನು ಬಿಜೆಪಿ ಸೇರ್ಪಡೆಯಾಗುತ್ತಿದ್ದೇನೆಂದು ತಿಳಿದುಕೊಂಡು ಆ ಪಕ್ಷದ ಕೆಲವು ಹಿರಿಯರು ಅಸಮಾಧಾನ ಹೊರ ಹಾಕಿದ್ದಾರೆ. ಅಲ್ಲದೆ, ಆರೋಪಗಳ ಮೂಲಕ ಹೈಕಮಾಂಡ್ ಗೆ ಪತ್ರ ರವಾನಿಸಿರುವುದಾಗಿ ತಿಳಿದು ಬಂದಿದೆ. ಆದರೆ ನನ್ನ ವಿರುದ್ಧದ ಆರೋಪಕ್ಕೆ ನಾನು ಶೀಘ್ರ ದಾಖಲೆ ಸಹಿತ ಉತ್ತರ ನೀಡುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.
40 ವರ್ಷಗಳ ಹಿಂದಿನ ವಿಚಾರವನ್ನು ಹಿಡಿದುಕೊಂಡು ನನ್ನ ಮೇಲೆ ಕೆಲವರು ಆರೋಪ ಮಾಡುತ್ತಿದ್ದಾರೆ. ಆದರೆ ಆ ಸಂದರ್ಭದಲ್ಲಿ ಏನು ನಡೆಯಿತು ಎಂಬ ಬಗ್ಗೆ ನನ್ನ ಬಳಿ ಸೂಕ್ತ ದಾಖಲೆ ಇದೆ. ನಾನು ಬೆಂಗಳೂರಿನಲ್ಲಿದ್ದ ಸಂದರ್ಭದಲ್ಲಿ ನನ್ನ ಮೇಲೆ ಧಾರವಾಡದಲ್ಲಿ ಎಫ್ಐಆರ್ ದಾಖಲಾಗಿತ್ತು. ಬಳಿಕ ಅದಕ್ಕೆ ತಡೆಯಾಜ್ಞೆ ಲಭಿಸಿ, ಎಫ್ಐಆರ್ ಹಾಕಿದ್ದ ಇನ್ಸ್ ಪೆಕ್ಟರ್ ಅಮಾನತುಗೊಂಡಿದ್ದಾರೆ. ಈ ಎಲ್ಲವುಗಳನ್ನು ದಾಖಲೆ ಸಹಿತ ತೋರಿಸುತ್ತೇನೆ ಎಂದವರು ಇದೇ ವೇಳೆ ಪ್ರತಿಕ್ರಿಯಿಸಿದರು.