ಹುಬ್ಬಳ್ಳಿ, ಮಾ 20 (DaijiworldNews/HR): ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ ಇನ್ನೊಂದು ವರ್ಷವಿದೆ, ಈಗಾಗಲೇ ತಯಾರಿ ನಡೆಯುತ್ತಿದೆ. ಪಂಚರಾಜ್ಯಗಳ ಚುನಾವಣೆಯಲ್ಲಿ 4 ರಾಜ್ಯಗಳಲ್ಲಿ ಗೆದ್ದಿರುವ ಬಿಜೆಪಿ ಕರ್ನಾಟಕದಲ್ಲಿ ಕೂಡ ಗೆಲ್ಲುತ್ತಾರೆ ಎಂಬ ಭ್ರಮೆಯಲ್ಲಿದ್ದಾರಷ್ಟೆ, ಇಲ್ಲಿಯ ಪರಿಸ್ಥಿತಿ ಬೇರೆಯಾಗಿದೆ. ಬಿಜೆಪಿಯವರು ಕರ್ನಾಟಕದಲ್ಲಿ ಸ್ವಂತ ಶಕ್ತಿ ಮೇಲೆ ಗೆದ್ದು ಬಂದಿಲ್ಲ. ಆಪರೇಷನ್ ಕಮಲ ಮಾಡಿಕೊಂಡು ಅಧಿಕಾರಕ್ಕೆ ಬಂದಿರುವುದು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಈ ಕುರಿತು ಮಾತನಡಿದ ಅವರು, ಮುಂದಿನ ಬಾರಿ ಸಮ್ಮಿಶ್ರ ಸರ್ಕಾರ ಅಲ್ಲ, ಕಾಂಗ್ರೆಸ್ ಮುಂಬರುವ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಗಳಿಸಲಿದೆ. ನೂರಕ್ಕೆ ನೂರರಷ್ಟು ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದರು.
ರಾಜ್ಯದ ಶಾಲಾ ಪಠ್ಯಕ್ರಮದಲ್ಲಿ ಭಗವದ್ಗೀತೆ ತರುವ ವಿಚಾರ ಬಗ್ಗೆ ಮಾತನಾಡಿದ ಅವರು, ಗುಜರಾತ್ ನವರು ತಂದಿರಬಹುದು, ರಾಜ್ಯದಲ್ಲಿ ತಂದಿದ್ದಾರೆಯೇ, ಇಲ್ಲದಿರುವ ವಿಚಾರಗಳ ಬಗ್ಗೆ ಏಕೆ ಕೇಳುತ್ತೀರಿ. ಮಕ್ಕಳಿಗೆ ನೈತಿಕ ಶಿಕ್ಷಣ ಬೇಕು ಜೊತೆಗೆ ಗುಣಮಟ್ಟದ ಶಿಕ್ಷಣ ಕೂಡ ಬೇಕು, ಈ ದೇಶದ ಭವಿಷ್ಯ ರೂಪಿಸುವವರು ಮಕ್ಕಳು, ಮಕ್ಕಳು ಸಶಕ್ತೀಕರಣಗೊಳ್ಳುವ ರೀತಿಯಲ್ಲಿ ಶಿಕ್ಷಣ ನೀಡಬೇಕು ಎಂದಿದ್ದಾರೆ.