ಬೆಂಗಳೂರು, ಮಾ 20 (DaijiworldNews/DB): ಸಹದ್ಯೋಗಿಗಳೇ ರಂಗಭೂಮಿ ಕಲಾವಿದೆಯೋರ್ವರ ಮೇಲೆ ಆಸಿಡ್ ಎರಚಿದ ಘಟನೆ ಬೆಂಗಳೂರಿನ ನಂದಿನಿ ಲೇಔಟ್ ನ ಗಣೇಶ ಬ್ಲಾಕ್ ನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಸಂತ್ರಸ್ತೆ ದೇವಿ ಮನೆಯ ಜಗಲಿ ಮೇಲೆ ಮಲಗಿದ್ದ ಸಂದರ್ಭ ಮಾರ್ಚ್ 18ರಂದು ಆಸಿಡ್ ದಾಳಿ ಮಾಡಲಾಗಿದೆ. ಅವರ ರಂಗಭೂಮಿ ಸಹದ್ಯೋಗಿಗಳಿಂದಲೇ ಕೃತ್ಯ ನಡೆದಿದ್ದು, ಆರೋಪಿಗಳಾದ ರಮೇಶ್, ಸ್ವಾತಿ ಮತ್ತು ಯೋಗೇಶ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಸದ್ಯ ಸಂತ್ರಸ್ತೆ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಂಸಾರ ಹಾಳು ಮಾಡಿದ ಕೋಪಕ್ಕೆ ಈ ದಾಳಿ ನಡೆದಿದೆ ಎನ್ನಲಾಗಿದೆ. ರಮೇಶ್ ಪತ್ನಿ ಮತ್ತು ಮಕ್ಕಳು ದೇವಿಯ ಮಾತು ಕೇಳಿ ಆತನನ್ನು ತೊರೆದು ಹೋಗಿದ್ದಾರೆ ಎಂದು ಕೋಪಗೊಂಡಿದ್ದ ರಮೇಶ್, ದೇವಿಯ ಜೀವನವನ್ನೂ ಹಾಳು ಮಾಡಬೇಕೆಂಬ ಉದ್ದೇಶದಿಂದ ಆಸಿಡ್ ಎರಚಲು ಯೋಗೇಶ್ ಗೆ 10 ಸಾವಿರ ರೂ. ಸುಪಾರಿ ನೀಡಿದ್ದ. ಯೋಗೇಶ್ ರಮೇಶ್ ನ ಗೆಳತಿ ಸ್ವಾತಿ ಮೂಲಕ ರಮೇಶ್ ಗೆ ಪರಿಚಯವಾಗಿದ್ದ.
ಆರೋಪಿಗಳು ಆಸಿಡ್ ದಾಳಿಗೆ ಮೂರು ಬಾರಿ ಸಂಚು ನಡೆಸಿದ್ದರು. ಈ ಬಾರಿ ದೇವಿ ಮಲಗುವ ಚಾಪೆಗೆ ಆಸಿಡ್ ಸಿಂಪಡಿಸಿ ಬಂದಿದ್ದರು. ಇದರಿಂದ ಸಂತ್ರಸ್ತೆಯ ಬೆನ್ನು, ಮುಖಕ್ಕೆ ಗಂಭೀರ ಗಾಯಗಳಾಗಿವೆ. ಸದ್ಯ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ತನಿಖೆ ನಡೆಯುತ್ತಿದೆ.