ಹೊಸದಿಲ್ಲಿ, ಮಾ 20 (DaijiworldNews/DB): ಅಸಾನಿ ಚಂಡಮಾರುತ ತೀವ್ರಗೊಂಡಿದ್ದು, ಹಲವೆಡೆ ಮಳೆ ಸಾಧ್ಯತೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಕೇಂದ್ರ ಸರ್ಕಾರವು ರಾಷ್ಟ್ರೀಯ ವಿಪತ್ತು ರಕ್ಷಣಾ ಪಡೆಯ (ಎನ್ ಡಿಆರ್ ಎಫ್) ಆರು ತಂಡಗಳನ್ನು ನಿಯೋಜನೆ ಮಾಡಿದೆ.
ಅಸಾನಿ ಚಂಡಮಾರುತವು ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ತೀರವನ್ನು ಸಮೀಪಿಸುತ್ತಿದೆ. ಈ ವೇಳೆ ಮುನ್ನೆಚ್ಚರಿಕಾ ಕ್ರಮವಾಗಿ ಎನ್ ಡಿಆರ್ ಎಫ್ ತಂಡಗಳನ್ನು ನಿಯೋಜಿಸಲಾಗಿದೆ. ಬಂಗಾಳಕೊಲ್ಲಿಯಲ್ಲಿನ ಕಡಿಮೆ ಒತ್ತಡ ಪ್ರದೇಶವು ಭಾನುವಾರ ಬೆಳಗ್ಗೆ ಸ್ಪಷ್ಟವಾಗಿ ಗೋಚರಿಸಿದ್ದು, ಸೋಮವಾರ ಇದು ಚಂಡಮಾರುತವಾಗಿ ಬದಲಾಗಿ ಅಂಡಮಾನ್, ನಿಕೋಬಾರ್ ದ್ವೀಪದಾದ್ಯಂತ ಚಲಿಸುತ್ತದೆ.
ಮಂಗಳವಾರದಂದು ಬಾಂಗ್ಲಾದೇಶ-ಉತ್ತರ ಮ್ಯಾನ್ಮಾರ್ ಕರಾವಳಿಯತ್ತ ಸಾಗಲಿದೆ. ಅಂಡಮಾನ್ ದ್ವೀಪಗಳಲ್ಲಿ ಇಂದೂ ಕೂಡಾ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂಬುದಾಗಿ ಹವಾಮಾನ ಇಲಾಖೆ ತಿಳಿಸಿದೆ.
ಚಂಡಮಾರುತ ಮತ್ತು ಮಳೆ ಸಾಧ್ಯತೆ ಹಿನ್ನೆಲೆಯಲ್ಲಿ ಮೀನುಗಾರರು ಮೀನುಗಾರಿಕೆಗೆ ತೆರಳದಂತೆ ಸ್ಥಳೀಯಾಡಳಿತವು ಎಚ್ಚರಿಕೆ ನೀಡಿದೆ. ಚಂಡಮಾರುತದ ಹಿನ್ನೆಲೆಯಲ್ಲಿ ಕರ್ನಾಟಕ ಕರಾವಳಿ ಭಾಗದಲ್ಲಿಯೂ ಶನಿವಾರ ಮಧ್ಯಾಹ್ನದ ಬಳಿಕ ಮತ್ತು ತಡರಾತ್ರಿ ಭಾರೀ ಮಳೆಯಾಗಿದೆ.