ಹುಬ್ಬಳ್ಳಿ,ಮಾ 20 (DaijiworldNews/HR): ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂಬ ಮಾತು ಕೇಳಿಬಂದಿದ್ದು, ಇದೀಗ ಬಿಜೆಪಿಯ ಕೆಲ ಹಿರಿಯ ಮುಖಂಡರು ಹೊರಟ್ಟಿ ಬಿಜೆಪಿ ಸೇರ್ಪಡೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಹೊರಟ್ಟಿ ಬಿಜೆಪಿ ಸೇರ್ಪಡೆಗೆ ವಿರೋಧಿಸಿರುವ ಬಿಜೆಪಿಯ ಕೆಲ ಮುಖಂಡರು, 10 ಅಂಶಗಳನ್ನು ಉಲ್ಲೇಖಿಸಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾಗೆ ಪತ್ರ ಬರೆದಿದ್ದು, ಹಲವು ನಾಯಕರ ಸಹಿ ಇರುವ ಪತ್ರದ ಜತೆಗೆ ಹೊರಟ್ಟಿ ವಿರುದ್ಧದ ಕೆಲ ದಾಖಲೆಗಳನ್ನು ರವಾನಿಸಿದ್ದಾರೆ.
ಇನ್ನು ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿಗೆ ಈಗಾಗಲೇ 76 ವರ್ಷವಾಗಿದ್ದು, ಬಿಜೆಪಿ ನಿಯಮದ ಪ್ರಕಾರ ಅವರಿಗೆ ಟಿಕೆಟ್ ನೀಡಲು ಸಾಧ್ಯವಿಲ್ಲ. ಅವರು ಎರಡು ವೇತನ ಪಡೆದ ಆರೋಪ ಹೊಂದಿದ್ದಾರೆ. 1980ರಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಅವರು, 1999ರವರೆಗೆ ಲ್ಯಾಮಿಂಗ್ಟನ್ ಶಾಲೆಯ ದೈಹಿಕ ಶಿಕ್ಷಕರಾಗಿ ವೇತನ ಪಡೆದಿದ್ದರು ಎಂದು ಆರೋಪಿದ್ದಾರೆ.
ಅಲ್ಲದೇ ಎಸ್ ಟಿ ಸಮಾಜಕ್ಕೆ ಸೇರಿದ ಸರ್ವೋದಯ ಶಿಕ್ಷಣ ಸಂಸ್ಥೆ ಆಸ್ತಿ ಕಬಳಿಕೆ ಆರೋಪ ಹೊರಟ್ಟಿ ಮೇಲಿದ್ದು, ಅವರ ವಿರುದ್ಧ ಎಫ್ಐಆರ್ ಕೂಡ ದಾಖಲಾಗಿದೆ.ಹೊರಟ್ಟಿ ಓರ್ವ ಕಳಂಕಿತ ವ್ಯಕ್ತಿ ಅಂತವರಿಗೆ ಟಿಕೆಟ್ ಕೊಟ್ಟು ಸಾಧಿಸುವುದೇನು ? ಎಂದು ಪ್ರಶ್ನಿಸಿದ್ದಾರೆ.