ಚೆನ್ನೈ, ಮಾ 20 (DaijiworldNews/DB): ಹಿಜಾಬ್ ವಿಚಾರವಾಗಿ ಕಳೆದ ಕೆಲ ದಿನಗಳ ಹಿಂದಷ್ಟೇ ತೀರ್ಪು ನೀಡಿದ ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಿಗೆ ಕೊಲೆ ಬೆದರಿಕೆ ಹಾಕಿದ್ದ ಇಬ್ಬರು ಕಿಡಿಗೇಡಿಗಳನ್ನು ತಮಿಳುನಾಡು ಪೊಲೀಸರು ಶನಿವಾರ ರಾತ್ರಿ ಬಂಧಿಸಿದ್ದಾರೆ.
ತಮಿಳುನಾಡಿನ ತಿರುನಲ್ ವೇಲಿ ಎಂಬಲ್ಲಿ ಕೊವಾಯಿ ರಹಮತುಲ್ಲಾ ಹಾಗೂ ತಂಜಾವೂರಿನಲ್ಲಿ ಎಸ್. ಜಮಾಲ್ ಮೊಹಮ್ಮದ್ ಉಸ್ಮಾನಿ ಎಂಬಾತನನ್ನು ಬಂಧನಕ್ಕೊಳಪಡಿಸಲಾಗಿದೆ. ಇಬ್ಬರೂ ಆರೋಪಿಗಳು ತಮಿಳುನಾಡಿನ ತೌಹೀದ್ ಜಮಾತೆ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು. ಇನ್ನೂ ಹಲವರ ವಿರುದ್ಧ ದೂರು ದಾಖಲಾಗಿದ್ದು, ತನಿಖೆ ಮುಂದುವರಿಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಮಿಳುನಾಡಿನ ಮಧುರೆಯಲ್ಲಿ ನಡೆದ ಪ್ರತಿಭಟನೆ ಸಂದರ್ಭದಲ್ಲಿ ತಮಿಳುನಾಡು ತೌಹೀದ್ ಜಮಾತೆ (ಟಿಎನ್ಟಿಜೆ) ಸಂಘಟನೆಯ ನಾಯಕ ಕೊವಾಯಿ ಆರ್. ರೆಹಮತುಲ್ಲಾ ಬೆದರಿಕೆ ಹಾಕಿದ್ದ. ಹಿಜಾಬ್ ಇಸ್ಲಾಂನ ಅತ್ಯಗತ್ಯ ಭಾಗವಲ್ಲ ಎಂಬುದಾಗಿ ತೀರ್ಪು ನೀಡಿದ ಕರ್ನಾಟಕದ ನ್ಯಾಯಮೂರ್ತಿಗಳಿಗೆ ಮುಂದೆ ಏನಾದರೂ ಆದರೆ ಅದಕ್ಕೆ ಅವರೇ ಹೊಣೆಗಾರರು, ನಾವಲ್ಲ. ಅಲ್ಲದೆ ಈ ರೀತಿ ಹೇಳಿದ್ದಕ್ಕೆ ನಮ್ಮನ್ನು ಜೈಲಿಗೆ ಹಾಕುವುದಾದರೆ ಹಿಜಾಬ್ ಗಾಗಿ ಹೋರಾಡಿ ಜೈಲುವಾಸ ಅನುಭವಿಸಿದ್ದು ಎಂದೇ ಪರಿಗಣನೆ ಮಾಡುತ್ತೇವೆ ಎಂದೂ ಬಹಿರಂಗವಾಗಿ ಹೇಳಿದ್ದ. ಅಲ್ಲದೆ, ಇಬ್ಬರೂ ಆರೋಪಿಗಳು ವೀಡಿಯೋ ಮುಖಾಂತರವೂ ನ್ಯಾಯಾಧೀಶರಿಗೆ ಕೊಲೆ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಆದರೆ, ಆ ಬಳಿಕ ಆರೋಪಿಗಳು ಪರಾರಿಯಾಗಿದ್ದರು.
ನ್ಯಾಯಾಧೀಶರಿಗೆ ಕೊಲೆ ಬೆದರಿಕೆ ಹಾಕಿದವರನ್ನು ತತ್ ಕ್ಷಣ ಬಂಧಿಸುವಂತೆ ಮಾಜಿ ಐಪಿಎಸ್ ಅಧಿಕಾರಿ, ಬಿಜೆಪಿ ಮುಖಂಡ ಅಣ್ಣಾಮಲೈ, ತಮಿಳುನಾಡು ವಕೀಲರ ಸಂಘ ಸೇರಿದಂತೆ ಹಲವರು ಪೊಲೀಸ್ ಇಲಾಖೆಗೆ ಒತ್ತಾಯಿಸಿದ್ದರು. ನ್ಯಾಯಾಧೀಶರಿಗೆ ಬೆಂಗಳೂರು ಪೊಲೀಸರು ಹೆಚ್ಚಿನ ಭದ್ರತೆ ಒದಗಿಸಿದ್ದಾರೆ.