ನವದೆಹಲಿ, ಮಾ 20 (DaijiworldNews/DB): ರಷ್ಯಾ ಉಕ್ರೇನ್ ಮೇಲೆ ಧಾಳಿ ನಡೆಸುತ್ತಿರುವ ವಿಚಾರವು ತುಂಬಾ ಕಳವಳಕಾರಿಯಾಗಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಇದು ಪರಿಣಾಮ ಬೀರುತ್ತಿದೆ ಎಂದು ಜಪಾನ್ ಪ್ರಧಾನಿ ಫುಮಿಯೋ ಕಿಷಿಡಾ ಆಂತಕ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮಾತುಕತೆ ನಡೆಸುವ ಸಂದರ್ಭದಲ್ಲಿ ಅವರು ಈ ಮಾತುಗಳನ್ನು ಆಡಿದ್ದಾರೆ.
ಬಳಿಕ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಷ್ಯಾ ತನ್ನ ಬಲಿಷ್ಠ ಸೇನೆಯನ್ನು ಬಳಸಿಕೊಂಡು ಯಾವುದೇ ದೇಶದ ಮೇಲೂ ದಾಳಿ ನಡೆಸುವುದು ಸರಿಯಲ್ಲ. ಇಂತಹ ದಾಳಿಗಳನ್ನು ಸಹಿಸುವುದು ಸಾಧ್ಯವಿಲ್ಲ. ಉಕ್ರೇನ್ ನಲ್ಲಿ ಸಂಘರ್ಷದಿಂದಾಗಿ ಮಾನವೀಯ ಬಿಕ್ಕಟ್ಟು ಎದುರಾಗಿರುವುದು ಆತಂಕಕಾರಿ. ಈ ಹಿಂಸಾಚಾರವನ್ನು ಕೊನೆಗಾಣಿಸಲು ತತ್ ಕ್ಷಣ ಮಾತುಕತೆ ನಡೆಸಿ ರಾಜತಾಂತ್ರಿಕತೆ ಮಾರ್ಗ ಅನುಸರಿಸಬೇಕು. ಈ ನಿಟ್ಟಿನಲ್ಲಿ ತಡಮಾಡದೆ ಅಗತ್ಯ ಕ್ರಮಕ್ಕೆ ಮುಂದಾಗಬೇಕು ಎಂಬುದಾಗಿ ಅಭಿಪ್ರಾಯ ವ್ಯಕ್ತಪಡಿಸಿದರು.
ಸದ್ಯದ ಸವಾಲುಗಳು ನಮ್ಮೆದುರು ಹೊಸ ಸಮಸ್ಯೆಗಳನ್ನು ಹುಟ್ಟು ಹಾಕಿದೆ. ಇದನ್ನು ಕೊನೆಗಾಣಿಸಿ ಪರಸ್ಪರ ಸಹಬಾಳ್ವೆಯಿಂದ ಬದುಕುವ ಅವಶ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಭಾರತ-ಜಪಾನ್ ಬಾಂಧವ್ಯ ವೃದ್ಧಿಯಾದರೆ ಎರಡೂ ದೇಶಗಳು ಹಲವು ಪ್ರಯೋಜನಗಳನ್ನು ಕಾಣಲಿವೆ. ಅಲ್ಲದೆ, ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಶಾಂತಿ, ಸ್ಥಿರತೆ ಹೆಚ್ಚಲು ಉಪಯೋಗವಾಗಲಿದೆ ಎಂದು ಮೋದಿ ಇದೇ ವೇಳೆ ತಿಳಿಸಿದರು.