ಶ್ರೀನಗರ, ಮಾ 19 (DaijiworldNews/DB): 'ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಬಳಿಕ ಮೊದಲ ಬಾರಿಗೆ ಇಲ್ಲಿನ ಭಯೋತ್ಪಾದನೆಯ ಮೇಲೆ ಕೇಂದ್ರವು ನಿರ್ಣಾಯಕ ನಿಯಂತ್ರಣ ಹೊಂದಿರುವುದು ನಮ್ಮ ದೊಡ್ಡ ಸಾಧನೆಯಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಉಗ್ರ ಚಟುವಟಿಕೆ ವಿರುದ್ಧ ಹೋರಾಟ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ತೊಡಗಿಸಿಕೊಂಡಿರುವ ಇಲ್ಲಿನ ಸಿಆರ್ಪಿಎಫ್, ದೇಶದ ಅತ್ಯುತ್ತಮ ಪೊಲೀಸ್ ಪಡೆ ಎನಿಸಿಕೊಂಡಿದೆ. ಸಿಆರ್ಪಿಎಫ್ ಯೋಧರ ತ್ಯಾಗ ದೊಡ್ಡದು. ಹುತಾತ್ಮ ಯೋಧರ ಕುಟುಂಬಗಳನ್ನು ಎಂದಿಗೂ ಸರ್ಕಾರ ಒಂಟಿಯಾಗಿ ಬಿಡುವುದಿಲ್ಲಎಂದರು.
ಇಲ್ಲಿನ ಮೌಲನಾ ಆಜಾದ್ ಕ್ರೀಡಾಂಗಣದಲ್ಲಿ ನಡೆದ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್ಪಿಎಫ್) 83ನೇ ಸಂಸ್ಥಾಪನಾ ದಿನಾಚರಣೆ ಸಮಾರಂಭದಲ್ಲಿ ಅವರು ಶನಿವಾರ ಮಾತನಾಡಿದರು.
ಕಣಿವೆ ಪ್ರದೇಶದಲ್ಲಿ ಪ್ರಜಾಪ್ರಭುತ್ವವನ್ನು ಉತ್ತುಂಗಕ್ಕೇರಿಸಲಾಗಿದೆ. ಇಲ್ಲಿನ ಸಮಗ್ರ ಅಭಿವೃದ್ಧಿ ನಿಟ್ಟಿನಲ್ಲಿಆಧುನಿಕ ವಿಧಾನ ಅನುಸರಿಸಲಾಗುತ್ತಿದೆ. ಜಮ್ಮು ಮತ್ತು ಕಾಶ್ಮೀರ ಆಡಳಿತವು 33 ಸಾವಿರ ಕೋಟಿ ರೂ. ಹೂಡಿಕೆಯನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಇಲ್ಲಿನ ಹೆದ್ದಾರಿಗಳನ್ನು ಮೇಲ್ದರ್ಜೆಗೆ ಏರಿಸಲಾಗುತ್ತಿದೆ ಎಂದರು.