ತುಮಕೂರು, ಮಾ 19 (DaijiworldNews/HR): ಪಾವಗಡ ತಾಲೂಕಿನ ಪಳವಳ್ಳಿ ಕಟ್ಟೆ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟವರಿಗೆ ತಲಾ 5 ಲಕ್ಷ ರೂಪಾಯಿ ಹಾಗೂ ಗಾಯಾಳುಗಳಿಗೆ 50 ಸಾವಿರ ರೂ. ಪರಿಹಾರವನ್ನು ಸಾರಿಗೆ ಸಚಿವ ಶ್ರೀರಾಮುಲು ಸರ್ಕಾರದ ವತಿಯಿಂದ ಘೋಷಣೆ ಮಾಡಿದ್ದಾರೆ.
ಈ ವೇಳೆ ಮಾತನಾಡಿದ ಅವರು, ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ವೈಯಕ್ತಿಕವಾಗಿ ತಲಾ 1 ಲಕ್ಷ ರೂಪಾಯಿ ಕೊಡುವುದಾಗಿ ತಿಳಿಸಿದರು.
ಬಸ್ ಪಲ್ಟಿಯಾದ ದುರಂತದಲ್ಲಿ ಇಬ್ಬರು ವಿದ್ಯಾರ್ಥಿಗಳು ಸೇರಿ ಐವರು ದುರ್ಮರಣಕ್ಕೀಡಾಗಿದ್ದು, 43 ಮಂದಿ ಗಾಯಗೊಂಡಿದ್ದಾರೆ.
ಮೃತಪಟ್ಟವರನ್ನು ಕಾಲೇಜು ವಿದ್ಯಾರ್ಥಿಗಳಾದ ಪೋತಗಾನಹಳ್ಳಿ ಅಮೂಲ್ಯ(20), ದಾದಾವಲಿ(20) ಹಾಗೂ ಸೂಲನಾಯಕನಹಳ್ಳಿಯ ಅಜಿತ್ ಕುಮಾರ್(22), ಬೆಸ್ತರಹಳ್ಳಿಯ ಮೆಕಾನಿಕ್ ಶಾನವಾಜ್ (18) ಹಾಗೂ ವೈ.ಎನ್.ಹೊಸಕೋಟೆಯ ಕಲ್ಯಾಣ್ ಕುಮಾರ್(22) ಎಂದು ಗುರುತಿಸಲಾಗಿದೆ.