ಚಿಕ್ಕಮಗಳೂರು, ಮಾ 19 (DaijiworldNews/DB): ಭಗವದ್ಗೀತೆ ಓದಿದವರು ಭಯೋತ್ಪಾದಕರಾಗಿಲ್ಲ. ಈ ಗ್ರಂಥವು ಉತ್ತಮ ದಾರಿಯಲ್ಲಿ ನಡೆಯಲು ಪ್ರೇರಣೆ ನೀಡುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಶನಿವಾರ ಹೇಳಿಕೆ ನೀಡಿದ್ದಾರೆ.
ಶಾಲಾ ಪಠ್ಯದಲ್ಲಿ ಭಗವದ್ಗೀತೆ ಸೇರ್ಪಡೆ ಕುರಿತು ಪರ-ವಿರೋಧದ ಚರ್ಚೆ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಅವರು, ಜಗತ್ತಿನ ಇತಿಹಾಸದಲ್ಲಿ ಭಗವದ್ಗೀತೆ ಓದಿ ಭಯೋತ್ಪಾದಕರಾದ ಯಾವುದೇ ಉದಾಹರಣೆ ಇಲ್ಲ. ಭಗವದ್ಗೀತೆ ಮಹಾತ್ಮ ಗಾಂಧೀಜಿಯವರಿಗೆ ಪ್ರೇರಣೆಯಾಗಿದೆ. ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಗೂ ಭಗವದ್ಗೀತೆ ಪ್ರೇರಣೆ ನೀಡಿದೆ ಎಂದರು.
ಕಾಶ್ಮೀರಿ ಫೈಲ್ಸ್ ವಾಸ್ತವಿಕ ಸತ್ಯದ ಘಟನೆಗಳ ಚಿತ್ರ . ಸಿದ್ಧರಾಮಯ್ಯನವರು ವಕೀಲರು. ಆಯಾ ಕಾಲಘಟ್ಟದ ಸರ್ಕಾರಿ ದಾಖಲೆಗಳಿವೆ. ಅದನ್ನು ನೋಡಲಿ ಎಂದು ಸಿದ್ಧರಾಮಯ್ಯ ಅವರಿಗೆ ತಿರುಗೇಟು ನೀಡಿದರು.
ದೇಶಾದ್ಯಂತ ಎಲ್ಲಾ ಪುಸ್ತಕದಲ್ಲಿ ರಾಮಾಯಣ-ಮಹಾಭಾರತದ ಅಂಶಗಳು ಬಂದರೆ ಧರ್ಮದ ಆಧಾರದಲ್ಲಿ ದೇಶ ಉಳಿಯುತ್ತದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್ ಹೇಳಿದ್ದರು.
ನಾವು ಓದಿರುವ ಪುಸ್ತಕದಲ್ಲಿ ಲಾರ್ಡ್ ವೆಲ್ಲೆಸ್ಲಿ, ಕರ್ಜನ್ ಮುಂತಾದವರ ಬಗ್ಗೆಯೇ ಬರೆಯಲಾಗಿತ್ತು. ಅವರು ಈ ದೇಶಕ್ಕೆ ಬಂದ ಆಕ್ರಮಣಕಾರರು. ಅವರ ಬಗ್ಗೆ ಇನ್ನೂ ನಮ್ಮ ಮಕ್ಕಳಿಗೆ ಹೇಳಿಕೊಡುವುದನ್ನು ಬಿಟ್ಟು ಬದುಕಲು ಕಲಿಸಬೇಕು ಎಂದು ಸಿ. ಟಿ. ರವಿ ತಿಳಿಸಿದರು.