ಬೆಂಗಳೂರು, ಮಾ 19 (DaijiworldNews/HR): ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಪಳವಳ್ಳಿಕಟ್ಟೆ ಬಳಿ ಖಾಸಗಿ ಬಸ್ ಅಪಘಾತ ದುರಂತದಲ್ಲಿ ಸಾವನ್ನಪ್ಪಿದವರಿಗೆ ದೊಡ್ಡ ಪ್ರಮಾಣದ ಪರಿಹಾರ ನೀಡಬೇಕು. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡಿ ಅವರಿಗೂ ಪರಿಹಾರ ಕೊಡಬೇಕು ಎಂದು ಹೆಚ್.ಡಿ.ಕುಮಾರಸ್ವಾಮಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಬಸ್ ಅಪಘಾತಕ್ಕೀಡಾಗಿ ಐವರು ಪ್ರಯಾಣಿಕರು ಸಾವನ್ನಪ್ಪಿರುವುದು ನನಗೆ ತೀವ್ರ ಆಘಾತ ಉಂಟು ಮಾಡಿದೆ. ಸಾರಿಗೆ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ಕಾರ್ಯ ಕೈಗೊಳ್ಳಬೇಕು ಎಂದರು.
ಖಾಸಗಿ ಬಸ್ಗಳ ಗುಣಮಟ್ಟ, ಪರವಾನಗಿ, ತಾಂತ್ರಿಕ ಕ್ಷಮತೆ, ವೇಗದ ಚಾಲನೆ ಇತ್ಯಾದಿಗಳ ಬಗ್ಗೆ ನಿರಂತರವಾಗಿ ದೂರು ಬರುತ್ತಲೇ ಇದ್ದರೂ ಸರ್ಕಾರವು ನಿರ್ಲಕ್ಷ್ಯ ಧೋರಣೆಯಲ್ಲೇ ಇದೆ. ಗ್ರಾಮೀಣ ಸಾರಿಗೆಯನ್ನು ಉತ್ತಮಪಡಿಸುವ ಸರ್ಕಾರದ ಮಾತುಗಳು ಕೇವಲ ಹೇಳಿಕೆಗಳಿಗೆ ಮಾತ್ರ ಸೀಮಿತವಾಗಿದೆ ಎಂದು ಆರೋಪಿಸಿದ್ದಾರೆ.
ಇನ್ನು ಅತಿವೇಗ ಹಾಗೂ ಚಾಲಕನ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿದೆ ಎಂಬ ಮಾಹಿತಿ ಸಿಕ್ಕಿದ್ದು, ಬಸ್ ಟಾಪ್ ಮೇಲೆಯೇ 40ಕ್ಕೂ ಹೆಚ್ಚು ಪ್ರಯಾಣಿಕರು ಕೂತಿದ್ದರು ಎಂದು ಹೇಳಲಾಗುತ್ತಿದೆ. ಇದು ಸಾರಿಗೆ ಇಲಾಖೆ ನಿರ್ಲಕ್ಷ್ಯದ ಪರಮಾವ. ಈ ಬಗ್ಗೆ ಸರ್ಕಾರ ಕಠಿಣ ಕ್ರಮ ವಹಿಸಬೇಕು. ಕರ್ತವ್ಯ ಲೋಪ ಎಸಗಿರುವ ಸಾರಿಗೆ ಇಲಾಖೆ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.