ಹಾಸನ, ಮಾ 19 (DaijiworldNews/DB): ರಾಜ್ಯದಲ್ಲಿ ರಾಜಕೀಯ ನಾಯಕರ ಒಗ್ಗಟ್ಟಿನ ಕೊರತೆಯಿಂದಾಗಿ ಅಂತಾರಾಜ್ಯ ಜಲ ವಿವಾದಗಳಲ್ಲಿ ಕರ್ನಾಟಕ ಪ್ರತಿ ಸಲವೂ ಭಾರೀ ಹಿನ್ನಡೆ ಎದುರಿಸುತ್ತಿದೆ ಎಂದು ಜೆಡಿಎಸ್ ವರಿಷ್ಠ ಎಚ್. ಡಿ. ದೇವೇಗೌಡ ಹೇಳಿದ್ದಾರೆ.
ಹೊಳೆನರಸೀಪುರ ತಾಲೂಕಿನ ಟಿ ಮಾಯಿಗೌಡನಹಳ್ಳಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ರಾಜ್ಯದ ನಾಯಕರಲ್ಲಿ ಒಗ್ಗಟ್ಟಿನ ಕೊರತೆ ಹೆಚ್ಚಿದೆ. ಒಗ್ಗಟ್ಟಿನಿಂದ ಹೋರಾಡದಿದ್ದಲ್ಲಿ ಜಲವಿವಾದದಲ್ಲಿ ಗೆಲುವು ಸಾಧ್ಯವಿಲ್ಲ. ತಮಿಳುನಾಡು ಮತ್ತು ಇತರ ನೆರೆಯ ರಾಜ್ಯಗಳೊಂದಿಗಿನ ಜಲ ವಿವಾದಗಳನ್ನು ಪರಿಹರಿಸಲು ನಾನು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದರು.
ಇಲ್ಲಿ ಮೂರು ಪಕ್ಷ, ಮೂರು ಗುಂಪು ಇದೆ. ತಮಿಳುನಾಡು, ಹೇಮಾವತಿ ವಿಚಾರವಾಗಿ ಮಾತನಾಡುವ ಅವಕಾಶ ಸಂಸತ್ತಿನಲ್ಲಿ ಇತ್ತು. ಆದರೆ, ಕಾಂಗ್ರೆಸ್ ಮುಖಂಡರು ಎದ್ದು ಹೋದರು. ನಾನು ತಾತ್ವಿಕವಾಗಿ ಹೋರಾಡಿದ್ದೇನೆಯೇ ಹೊರತು ಅಧಿಕಾರಕ್ಕಾಗಿ ಯಾವತ್ತೂ ಹೋರಾಟ ಮಾಡಿಲ್ಲ ಎಂದವರು ತಿಳಿಸಿದರು.
ಕೇಂದ್ರದಲ್ಲಿ ನನ್ನ ನೇತೃತ್ವದ ಸರಕಾರ ಅಲ್ಪ ಮತಕ್ಕೆ ಕುಸಿದಾಗ ವಾಜಪೇಯಿ ಸಹಾಯ ಮಾಡುವುದಾಗಿ ಹೇಳಿದ್ದರು. ಆದರೆ ನಾನದನ್ನು ನಯವಾಗಿ ತಿರಸ್ಕರಿಸಿದ್ದೆ ಎಂದು ಇದೇ ವೇಳೆ ಎಚ್ ಡಿಡಿ ತಿಳಿಸಿದರು.