ನವದೆಹಲಿ, ಮಾ 19 (DaijiworldNews/MS): ಹಣದುಬ್ಬರ ಮತ್ತಷ್ಟು ಏರಿಕೆಯಾಗಲಿದೆ ಎಂದು ಎಚ್ಚರಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ದೇಶದ ಜನರನ್ನು ರಕ್ಷಿಸಲು ಸರ್ಕಾರ ಈಗಲೇ ಕ್ರಮ ಕೈಗೊಳ್ಳಬೇಕು ಎಂದು ಶನಿವಾರ ಒತ್ತಾಯಿಸಿದ್ದಾರೆ.
ಹಣದುಬ್ಬರವು ಎಲ್ಲಾ ಭಾರತೀಯರ ಮೇಲಿನ ತೆರಿಗೆಯಾಗಿದೆ ಎಂದು ಪ್ರತಿಪಾದಿಸಿದ ಗಾಂಧಿ, ರಷ್ಯಾ-ಉಕ್ರೇನ್ ಯುದ್ಧದ ಮುಂಚೆಯೇ ದಾಖಲೆಯ ಬೆಲೆ ಏರಿಕೆಯು ಬಡವರು ಮತ್ತು ಮಧ್ಯಮ ವರ್ಗದ ಜನರು ತತ್ತರಿಸಿದ್ದಾರೆ ಎಂದು ಹೇಳಿದ್ದಾರೆ.
ಹಣದುಬ್ಬರವು ಮತ್ತಷ್ಟು ಏರಿಕೆಯಾಗಲಿದೆ. ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್ಗೆ 100 ಅಮೆರಿಕನ್ ಡಾಲರ್, ಆಹಾರ ಬೆಲೆ ಶೇ 22ರಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಕೋವಿಡ್ ಜಾಗತಿಕ ಪೂರೈಕೆ ಸರಪಳಿಯನ್ನು ಅಡ್ಡಿಪಡಿಸುತ್ತದೆ. ಹಾಗಾಗಿ ಕೇಂದ್ರ ಸರ್ಕಾರವು ಈಗಲೇ ಕಾರ್ಯಪ್ರವೃತರಾಗಿ ಜನರನ್ನು ರಕ್ಷಿಸಬೇಕಿದೆ' ಎಂದು ಟ್ವೀಟ್ ಮಾಡಿದ್ದಾರೆ.
ಸೋಮವಾರ ಬಿಡುಗಡೆಯಾದ ಸರ್ಕಾರದ ಅಂಕಿಅಂಶಗಳ ಪ್ರಕಾರ, ಫೆಬ್ರವರಿಯಲ್ಲಿ ಚಿಲ್ಲರೆ ಹಣದುಬ್ಬರವು ಎಂಟು ತಿಂಗಳ ಗರಿಷ್ಠ ಮಟ್ಟವಾದ 6.07 ಶೇಕಡಾವನ್ನು ತಲುಪಿದೆ ಮತ್ತು ಕಚ್ಚಾ ತೈಲ ಮತ್ತು ಆಹಾರೇತರ ವಸ್ತುಗಳ ಬೆಲೆಗಳು ಹೆಚ್ಚಾಗುತ್ತಿರುವ ಕಾರಣದಿಂದಾಗಿ ಸಗಟು ಬೆಲೆ ಆಧಾರಿತ ಹಣದುಬ್ಬರವು ಶೇಕಡಾ 13.11 ಕ್ಕೆ ಏರಿದೆ.