ನವದೆಹಲಿ, ಮಾ 19 (DaijiworldNews/MS): ಭಾರತ-ಜಪಾನ್ 14ನೇ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರು ದೆಹಲಿಗೆ ಆಗಮಿಸಿದ್ದಾರೆ. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.
ಅಧಿಕಾರ ವಹಿಸಿಕೊಂಡ ಫ್ಯೂಮಿಯೊ ಕಿಶಿಡಾ ಅವರ ಮೊದಲ ಭಾರತ ಭೇಟಿಯಾಗಿದ್ದು , ಪ್ರಮುಖವಾಗಿ ಸಭೆಯಲ್ಲಿ ಉಕ್ರೇನ್ ಬಿಕ್ಕಟ್ಟು, ಚೀನಾ, ಹೂಡಿಕೆ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ.
ಇದೇ ವೇಳೆ ಎರಡೂ ದೇಶಗಳು ಆರ್ಥಿಕ ಸಹಕಾರವನ್ನು ಹೆಚ್ಚಿಸುವುದರ ಜೊತೆಗೆ ಇಂಡೋ-ಪೆಸಿಫಿಕ್ ಪ್ರದೇಶದ ಮಾತುಕತೆಗಳ ಬಗ್ಗೆ ಚರ್ಚಿಸಲಿವೆ ಎಂದು ಮೂಲಗಳು ತಿಳಿಸಿವೆ.
ಇದಲ್ಲದೆ, ಜಪಾನ್ ಸಮುದ್ರದಲ್ಲಿ ರಷ್ಯಾದ ವಾಯುಪಡೆಯೊಂದಿಗೆ ಜಂಟಿ ಸಮರಾಭ್ಯಾಸ, ಸುಲು ಹಾಗೂ ಫಿಲಿಪೈನ್ಸ್ ಸಮುದ್ರದಲ್ಲಿ ಯುದ್ಧನೌಕೆಗಳನ್ನು ಕಳುಹಿಸುವ ಬಗ್ಗೆಯೂ ಚರ್ಚಿಸಲಾಗುವುದು. ಈ ಸಭೆಯ ಬಳಿಕ ಮಾರ್ಚ್ 20ರಂದು ಕಿಶಿದಾ ಕಾಂಬೋಡಿಯಾ ಪ್ರವಾಸ ಕೈಗೊಳ್ಳಲಿದ್ದಾರೆ.
ಉಕ್ರೇನ್ನಲ್ಲಿ ತನ್ನ ಮಿಲಿಟರಿ ಕಾರ್ಯಾಚರಣೆಗಾಗಿ ಪಾಶ್ಚಿಮಾತ್ಯ ದೇಶಗಳು ರಷ್ಯಾದ ವಿರುದ್ಧ ನಿರ್ಬಂಧಗಳನ್ನು ವಿಧಿಸುತ್ತಿರುವ ಮಧ್ಯೆ ಕಿಶಿದಾ ಅವರ ಭಾರತ ಭೇಟಿಯು ಮಹತ್ವವನ್ನು ಪಡೆದಿದೆ.