ಅಹ್ಮದಾಬಾದ್, ಮಾ 19 (DaijiworldNews/DB): ಎಲ್ಲಾ ಪವಿತ್ರ ಗ್ರಂಥಗಳಲ್ಲಿರುವ ತತ್ವಾದರ್ಶಗಳನ್ನು ಶಾಲಾ ಪಠ್ಯಪುಸ್ತಕದಲ್ಲಿ ಅಳವಡಿಸಿಕೊಳ್ಳುವಂತೆ ಒತ್ತಾಯಿಸಿ ದ ಗುಜರಾತ್ ಕ್ಯಾಥೋಲಿಕ್ ಸಂಸ್ಥೆಗಳ ಶಿಕ್ಷಣ ಮಂಡಳಿಯು ಸಿಎಂ ಭೂಪೇಂದ್ರ ಪಟೇಲ್ ಅವರಿಗೆ ಪತ್ರ ಬರೆದಿದೆ.
ಗೀತಾಧ್ಯಯನ ಮತ್ತು ಶ್ಲೋಕಗಳ ಬಗ್ಗೆ ಜ್ಞಾನ ಹೊಂದುವುದರೊಂದಿಗೆ ಭಾರತೀಯ ಶಿಕ್ಷಣ ಪದ್ಧತಿ ಕಲಿಸುವ ನಿಟ್ಟಿನಲ್ಲಿ ಶಾಲೆಗಳಲ್ಲಿ ಭಗವದ್ಗೀತೆ ಬೋಧಿಸುವುದಾಗಿ ಗುಜರಾತ್ ಶಿಕ್ಷಣ ಸಚಿವ ಜೀತು ವಘಾನಿ ಶುಕ್ರವಾರವಷ್ಟೇ ಘೋಷಿಸಿದ್ದರು. ಅಲ್ಲದೆ 6 ರಿಂದ 12ನೇ ತರಗತಿಯವರೆಗೆ ಭಗವದ್ಗೀತೆ ಕಲಿಕೆ ಕಡ್ಡಾಯಗೊಳಿಸಿ ಆದೇಶಿಸಿದ್ದರು.
ಈ ನಿಟ್ಟಿನಲ್ಲಿ ಮಂಡಳಿಯು ಮುಖ್ಯಮಂತ್ರಿಯವರಿಗೆ ಪತ್ರ ಬರೆದು, ರಾಷ್ಟ್ರೀಯ ಶಿಕ್ಷಣ ನೀತಿ-2020ರ ಅನುಸಾರ ಎಲ್ಲಾ ಧರ್ಮಗಳ ಪವಿತ್ರ ಗ್ರಂಥಗಳಲ್ಲಿರುವ ತತ್ವಾದರ್ಶಗಳನ್ನು ಪಠ್ಯದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಒತ್ತಾಯಿಸಿದೆ.
ಈ ಕುರಿತು ಸುದ್ದಿ ಸಂಸ್ಥೆಯೊಂದಕ್ಕೆ ಪ್ರತಿಕ್ರಿಯಿಸಿದ ಮಂಡಳಿ ಕಾರ್ಯದರ್ಶಿ ಫಾ. ಟೆಲಿಸ್ ಫೆರ್ನಾಂಡಿಸ್, ಶಾಲೆಗಳಲ್ಲಿ ಭಗವದ್ಗೀತೆ ಕಲಿಸುವುದು ಒಳ್ಳೆಯದೇ. ಆದರೆ ಇದರೊಂದಿಗೆ ಇತರ ಪವಿತ್ರ ಗ್ರಂಥಗಳಲ್ಲಿರುವ ಅತ್ಯುತ್ತಮ ಬದುಕಿಗೆ ದಾರಿದೀಪವಾಗಬಲ್ಲ ಜ್ಞಾನವೂ ವಿದ್ಯಾರ್ಥಿಗಳಿಗೆ ಅಗತ್ಯವಾಗಿ ಬೇಕು. ಈ ನಿಟ್ಟಿನಲ್ಲಿ ಅವುಗಳ ಸೇರ್ಪಡೆ ಅಗತ್ಯವಾಗಿದೆ ಎಂದಿದ್ದಾರೆ.