ಬೆಂಗಳೂರು, ಮಾ 19 (DaijiworldNews/DB): ನಟ ಪುನೀತ್ ರಾಜಕುಮಾರ್ ಅವರ ಜೀವನ ಚರಿತ್ರೆಯನ್ನ ಪಠ್ಯದಲ್ಲಿ ಅಳವಡಿಸುವ ಸಂಬಂಧ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ.
ಚಿಕ್ಕ ವಯಸ್ಸಿನಲ್ಲೇ ರಾಷ್ಟ್ರ ಪ್ರಶಸ್ತಿ ಪಡೆದುದಲ್ಲದೆ, ಜಾತಿ-ಧರ್ಮ ಮೀರಿ ಹಲವು ಜನರ ಪ್ರೀತಿ ಗಳಿಸಿದ್ದಾರೆ. ಶಿಕ್ಷಣ ಕ್ಷೇತ್ರಕ್ಕೂ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅವರ ನಿಧನಾನಂತರ ಪುನೀತ್ ಜೀವನ ಗಾಥೆಯನ್ನು ಪ್ರಾಥಮಿಕ ಶಾಲಾ ಮಕ್ಕಳಿಗೆ ಪಠ್ಯವನ್ನಾಗಿ ಮಾಡುವಂತೆ ಹಲವಾರು ಸಂಘ-ಸಂಸ್ಥೆಗಳಿಂದ ಬೇಡಿಕೆ ಬಂದಿದೆ. 4 ಅಥವಾ 5ನೇ ತರಗತಿಯ ಪಠ್ಯದಲ್ಲಿ ಈ ವಿಚಾರ ಅಳವಡಿಕೆ ಮಾಡಬೇಕು ಎಂದು ಬಿಬಿಎಂಪಿಯ ಶಿಕ್ಷಣ ವಿಭಾಗಕ್ಕೂ ಪತ್ರ ಬಂದಿದೆ. ಈ ನಿಟ್ಟಿನಲ್ಲಿ ಚರ್ಚೆ ನಡೆಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.
ಚಲನಚಿತ್ರ ನಟರಾಗಿದ್ದರೂ 26 ಅನಾಥಾಶ್ರಮ, 19 ಗೋಶಾಲೆ, 16 ವೃದ್ಧಾಶ್ರಮ ಹಾಗೂ 4800ಕ್ಕೂ ಹೆಚ್ಚು ಬಡ ವಿದ್ಯಾರ್ಥಿಗಳ ಓದಿಗೆ ಸೂರ್ತಿಯಾಗಿದ್ದ ಪುನೀತ್ ರಾಜ್ಕುಮಾರ್ ಅವರ ಪಠ್ಯವನ್ನು ಪ್ರಾಥಮಿಕ ಶಾಲಾ ಪುಸ್ತಕದಲ್ಲಿ ಅಳವಡಿಸುವಂತೆ ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಎನ್.ಆರ್. ರಮೇಶ್ ಅವರೂ ಶಿಕ್ಷಣ ಸಚಿವರಿಗೆ ಪತ್ರ ಬರೆದು ಒತ್ತಾಯಿಸಿದ್ದರು. ಬಿಬಿಎಂಪಿ ಶಿಕ್ಷಣ ಇಲಾಖೆಗೆ ಬಂದಿದ್ದ ಸಂಘ-ಸಂಸ್ಥೆಗಳ ಮನವಿಯನ್ನು ಅಧಿಕಾರಿಗಳು ನನ್ನ ಗಮನಕ್ಕೆ ತಂದಿದ್ದರು. ಎನ್.ಆರ್. ರಮೇಶ್ ಹಾಗೂ ಸಂಘ ಸಂಸ್ಥೆಗಳ ಮನವಿಯನ್ನು ಗಂಭೀರವಾಗಿ ಪರಿಗಣಿಸಿ ಪ್ರಾಥಮಿಕ ಶಾಲೆಯ 4 ಅಥವಾ 5ನೆ ತರಗತಿಯ ಪಠ್ಯದಲ್ಲಿ ಪುನೀತ್ ರಾಜ್ಕುಮಾರ್ ಅವರ ಬದುಕನ್ನು ಪಠ್ಯವನ್ನಾಗಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಬಿ.ಸಿ. ನಾಗೇಶ್ ಅವರು ಭರವಸೆ ನೀಡಿದರು.