ಪಂಜಾಬ್, ಮಾ. 18(DaijiworldNews/SM): ಆಮ್ ಆದ್ಮಿ ಪಕ್ಷ ಪಂಜಾಬ್ ನಲ್ಲಿ ಭರ್ಜರಿ ಗೆಲುವು ದಾಖಲಿಸಿದ ಬಳಿಕ ನೂತನ ಸಿಎಂ ಭಗವಂತ್ ಮಾನ್ ಇಗಾಗಲೇ ಪ್ರಮಾಣ ಸ್ವೀಕರಿಸಿದ್ದು, ಮಾರ್ಚ್ 19ರ ಶನಿವಾರದಂದು ನೂತನ ಸಚಿವ ಸಂಪುಟ ಅಸ್ತಿತ್ವಕ್ಕೆ ಬರಲಿದೆ.
ಬೆಳಗ್ಗೆ 11 ಗಂಟೆಗೆ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಬಳಿಕ ಪಂಜಾಬ್ ಸಿವಿಲ್ ಸೆಕ್ರೆಟರಿಯೇಟ್ನಲ್ಲಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ನಂತರ ಮಧ್ಯಾಹ್ನ 12.30ಕ್ಕೆ ಆಮ್ ಆದ್ಮಿ ಪಕ್ಷದ ನೇತೃತ್ವದ ಪಂಜಾಬ್ ಸರ್ಕಾರದ ಮೊದಲ ಸಚಿವ ಸಂಪುಟ ಸಭೆ ನಡೆಯಲಿದ್ದು, ನೂತನ ಸಚಿವರುಗಳು ಭಾಗವಹಿಸಲಿದ್ದಾರೆ.
ಇನ್ನು ಈಗಾಗಲೇ ಮುಖ್ಯಮಂತ್ರಿಯಾಗಿ ಭಗವಂತ್ ಮಾನ್ ಜೊತೆಗೆ ಚುನಾಯಿತ ಸದಸ್ಯರೆಲ್ಲರೂ ವಿಧಾನ ಸಭೆಯಲ್ಲಿ ಸದಸ್ಯರಾಗಿ ಪ್ರಮಾಣ ಸ್ವೀಕರಿಸಿದರು.
"ಆಮ್ ಆದ್ಮಿ ಪಕ್ಷದ ಸರ್ಕಾರ ಪಂಜಾಬ್ನಲ್ಲಿ ಹೊಸ ಬದಲಾವಣೆಯನ್ನು ತರಲಿದೆ ಅದಕ್ಕಾಗಿ ಜನರು ನಮ್ಮನ್ನು ಆಯ್ಕೆ ಮಾಡಿದ್ದಾರೆ. ನಮ್ಮ ಸರ್ಕಾರವು ಪಂಜಾಬ್ನ ಅತ್ಯಂತ ಪ್ರಾಮಾಣಿಕ ಸರ್ಕಾರ ಎಂದು ಕರೆಯಲ್ಪಡುತ್ತದೆ," ಎಂದು ನೂತನ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ತಿಳಿಸಿದ್ದಾರೆ.