ಜಮ್ಮುಕಾಶ್ಮೀರ, ಮಾ 18 (DaijiworldNews/DB): ದೇಶಾದ್ಯಂತ ಪರ-ವಿರೋಧ ಚರ್ಚೆಗೆ ಕಾರಣವಾಗಿರುವ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾದಲ್ಲಿ ಅನೇಕ ಸುಳ್ಳುಗಳನ್ನು ಬಿಂಬಿಸಲಾಗಿದೆ ಎಂದು ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹೇಳಿದ್ದಾರೆ.
ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಚಿತ್ರವು ಸಾಕ್ಷ್ಯಚಿತ್ರವೇ ಅಥವಾ ಚಲನಚಿತ್ರವೇ ಎಂಬುದು ಸ್ಪಷ್ಟವಾಗಿಲ್ಲ. ಚಿತ್ರವು ನೈಜತೆಯಿಂದ ಕೂಡಿದೆ ಎಂಬ ನಿರ್ಮಾಪಕರ ಮಾತಿನಲ್ಲಿ ಹುರುಳಿಲ್ಲ. ಈ ಚಿತ್ರ ಹಲವು ಸುಳ್ಳುಗಳನ್ನು ಒಳಗೊಂಡಿದೆ ಎಂದು ಆಪಾದಿಸಿದರು.
ಕಾಶ್ಮೀರಿ ಪಂಡಿತರು ಕಣಿವೆ ರಾಜ್ಯ ತೊರೆದಾಗ 1990ರಲ್ಲಿ ಜಮ್ಮು-ಕಾಶ್ಮೀರದಲ್ಲಿ ಎನ್ ಸಿ ಸರ್ಕಾರ ಇತ್ತು ಎಂಬುದು ಸುಳ್ಳು. ಆಗ ರಾಜ್ಯಪಾಲರ ಆಳ್ವಿಕೆ ಇತ್ತು. ಕಾಶ್ಮೀರಿ ಪಂಡಿತರು ಮಾತ್ರ ವಲಸೆ ಹೋಗಿಲ್ಲ ಮತ್ತು ಕೊಲ್ಲಲ್ಪಟ್ಟಿಲ್ಲ. ಮುಸ್ಲಿಮರು, ಸಿಖ್ಖರು ಕೂಡಾ ಕೊಲ್ಲಲ್ಪಟ್ಟರು ಮತ್ತು ಅವರು ಕೂಡಾ ಕಾಶ್ಮೀರದಿಂದ ವಲಸೆ ಹೋಗಬೇಕಾಯಿತು ಎಂದರು.