ಬೆಂಗಳೂರು, ಮಾ 18 (DaijiworldNews/DB): ಮೇಕೆದಾಟು ಯೋಜನೆ ಜಾರಿ ವಿಚಾರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರ ಜೊತೆ ಮಾತುಕತೆ ನಡೆಸಲು ಸರ್ವಪಕ್ಷ ನಿಯೋಗ ಕೊಂಡೊಯ್ಯುವ ಬಗ್ಗೆ ಶುಕ್ರವಾರ ನಡೆದ ಸರ್ವ ಪಕ್ಷಗಳ ಸಭೆಯಲ್ಲಿ ನಿರ್ಧರಿಸಲಾಗಿದೆ. ಯೋಜನೆಗೆ ತಮಿಳುನಾಡು ವಿರೋಧಕ್ಕೆ ಮಣಿಯದಿರಲು ಸಭೆಯಲ್ಲಿ ಸಹಮತ ದೊರೆತಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ ಮಾಧುಸ್ವಾಮಿ, ಗೋವಿಂದ ಕಾರಜೋಳ, ಕಾಂಗ್ರೆಸ್ನ ಎಂ.ಬಿ. ಪಾಟೀಲ್, ಬಿ.ಕೆ. ಹರಿಪ್ರಸಾದ್, ಎಚ್.ಕೆ. ಪಾಟೀಲ್, ಜೆಡಿಎಸ್ನ ಬಂಡೆಪ್ಪ ಕಾಶಂಪುರ್, ಶ್ರೀಕಂಠೇಗೌಡ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮೊದಲಾದವರು ಸಭೆಯಲ್ಲಿ ಭಾಗವಹಿಸಿದ್ದರು.
ಈ ವೇಳೆ ಮಾತನಾಡಿದ ಡಿ. ಕೆ. ಶಿವಕುಮಾರ್, ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ರಾಜಕೀಯ ಇಚ್ಛಾಶಕ್ತಿ ಬೇಕು. ಇದು ಕರ್ನಾಟಕದ ಭೌಗೋಳಿಕ ಪರಿಧಿಯಲ್ಲಿ ಬರುತ್ತದೆ. ನೆರೆ ರಾಜ್ಯಗಳ ಅನುಮತಿ ಇದಕ್ಕೆ ಬೇಕು ಎಂದು ಯಾವ ಕಾನೂನು ಹೇಳಿಲ್ಲ ಎಂದರು.
ಕುಡಿಯುವ ನೀರು ಯೋಜನೆಗೆ ಯಾವುದೇ ಅಡಚಣೆ ಮಾಡಬಾರದು ಎಂದು ಸುಪ್ರೀಂ ಕೋರ್ಟ್ ಕೂಡಾ ಹೇಳಿದೆ. ಸುಪ್ರೀಂ ಕೋರ್ಟ್, ರಾಷ್ಟ್ರೀಯ ಜಲ ಆಯೋಗ, ಕಾವೇರಿ ಪ್ರಾಧಿಕಾರ, ಕೇಂದ್ರ ಸರಕಾರ ಸೇರಿದಂತೆ ಯಾರ ಅಸಮಾಧಾನವೂ ಈ ಯೋಜನೆ ಕುರಿತಾಗಿ ಇಲ್ಲ. ಅರಣ್ಯ ಮತ್ತು ಪರಿಸರ ಇಲಾಖೆ ಅನುಮತಿ ಮಾತ್ರ ಬಾಕಿ ಉಳಿದಿದೆ. ಕೇಂದ್ರ ಸರಕಾರದ ಮೇಲೆ ರಾಜ್ಯ ಸರಕಾರ ಒತ್ತಡ ಹಾಕಿದಲ್ಲಿ ಈ ಅನುಮತಿ ಸಿಗುವುದು ಕಷ್ಟವೇನಲ್ಲ ಎಂದರು.
ಈ ಯೋಜನೆ ಅನುಷ್ಠಾನಗೊಂಡರೆ ನಮ್ಮ ರಾಜ್ಯಕ್ಕಿಂತ ತಮಿಳುನಾಡಿಗೇ ಹೆಚ್ಚು ಲಾಭವಾಗಲಿದೆ. ಇದನ್ನು ಬೆಂಗಳೂರು ಜನರ ಕುಡಿಯುವ ನೀರಿನ ಉದ್ದೇಶಕಷ್ಟೇ ಬಳಸುತ್ತೇವೆಯೇ ಹೊರತು ನೀರಾವರಿ ಉದ್ದೇಶಕ್ಕಲ್ಲ. ಇದು ತಮಿಳುನಾಡಿಗೆ ಗೊತ್ತಿದ್ದೂ, ರಾಜಕೀಯ ಕಾರಣಕ್ಕಾಗಿ ಆ ರಾಜ್ಯದ ನಾಯಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಅವರ ವಿರೋಧಕ್ಕೆ ಮಣಿಯದೇ ಯೋಜನೆ ಅನುಷ್ಠಾನಕ್ಕೆ ಎಲ್ಲರೂ ಕೂಡಿ ಪ್ರಯತ್ನ ನಡೆಸಬೇಕು ಎಂದು ತಿಳಿಸಿದರು.