ಬೆಂಗಳೂರು, ಮಾ 18 (DaijiworldNews/DB): ಹಿಜಾಬ್ ವಿಚಾರದಲ್ಲಿ ಹೈಕೋರ್ಟ್ ಆದೇಶ ಪಾಲಿಸದೆ ಅರಾಜಕತೆ ಸೃಷ್ಟಿಸಲು ಪ್ರಯತ್ನ ನಡೆಸುತ್ತಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಚಿವ ಜಗದೀಶ್ ಶೆಟ್ಟರ್ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ನ್ಯಾಯಾಲಯದ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಲು ಅವರಿಗೆ ಅವಕಾಶವಿದೆ. ಅದು ಬಿಟ್ಟು ಕಾಲೇಜುಗಳ ಎದುರು, ಬೀದಿಗಳಲ್ಲಿ ನಿಂತು ಪ್ರತಿಭಟನೆ ಮಾಡುವುದು ಸರಿಯಲ್ಲ. ರಾಜ್ಯದಲ್ಲಿ ಅರಾಜಕತೆ ಸೃಷ್ಟಿಸಲು ಯತ್ನಿಸುವವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಗುಜರಾತ್ ಪಠ್ಯ ಪುಸ್ತಕದಲ್ಲಿ ಭಗವದ್ಗೀತೆ ಅಳವಡಿಕೆ ಬಗ್ಗೆ ತಿಳಿದಿಲ್ಲ. ಆದರೆ ಭಗವದ್ಗೀತೆ ಅಧ್ಯಯನ ಒಳ್ಳೆಯದೇ ಆಗಿದ್ದು, ಜೀವನದಲ್ಲಿ ಅಳವಡಿಸಿಕೊಳ್ಳುವ ಸಾಕಷ್ಟು ಅಂಶಗಳು ಅದರಲ್ಲಿವೆ ಎಂದರು.
ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಬಂದಿದ್ದ ವಿಜಯೇಂದ್ರ ಅವರು ನಮ್ಮ ಮನೆಗೂ ಬಂದಿದ್ದರು. ಅದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ. ಕಾಂಗ್ರೆಸ್ ನವರು ಬಂದರೆ ಊಹಾಪೋಹಗಳೇಳುವುದು ಸಾಮಾನ್ಯ. ಬಿಜೆಪಿ ಮುಖಂಡರೇ ಬಿಜೆಪಿಯವರ ಮನೆಗೆ ಬಂದರೆ ಈ ಬಗ್ಗೆ ಅನಗತ್ಯ ಮಾತು ಯಾಕೆ ಎಂದು ಪ್ರಶ್ನಿಸಿದರು.