ನವದೆಹಲಿ, ಮಾ 18 (DaijiworldNews/DB): ನಮ್ಮ ಭಾರತದ ಮಣ್ಣು ಬುಲೆಟ್ ರೈಲುಗಳ ಓಡಾಟಕ್ಕೆ ಸೂಕ್ತವಾಗಿಲ್ಲಎಂದು ನಟಿ, ಸಂಸದೆ ನುಸ್ರತ್ ಜಹಾನ್ ಸಂಸತ್ತಿನಲ್ಲಿ ಹೇಳಿಕೆ ನೀಡಿದ್ದಾರೆ. ಆದರೆ, ಈ ಹೇಳಿಕೆಯನ್ನು ತಳ್ಳಿ ಹಾಕಿರುವ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್, ಸಂಸದೆಯ ಹೇಳಿಕೆ ನಾಚಿಕೆಗೇಡಿನದ್ದಾಗಿದೆ ಎಂದು ತಿರುಗೇಟು ನೀಡಿದ್ದಾರೆ.
ಸಂಸತ್ತಿನಲ್ಲಿ ಭಾಷಣ ಮಾಡಿದ ನುಸ್ರತ್, ಬುಲೆಟ್ ರೈಲುಗಳ ಓಡಾಟಕ್ಕೆ ಭಾರತದ ಮಣ್ಣು ಸೂಕ್ತವಲ್ಲ ಎಂದಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಚಿವರು, ಸಂಸದೆಯ ಹೇಳಿಕೆ ನಾಚಿಕೆಗೇಡಿನದ್ದಾಗಿದೆ. ಅವರು ನಮ್ಮ ವಿಜ್ಞಾನಿಗಳ ಸಾಮರ್ಥ್ಯವನ್ನೇ ಪ್ರಶ್ನಿಸುತ್ತಿದ್ದಾರೆ. ಆದರೆ ನಮ್ಮ ವಿಜ್ಞಾನಿಗಳು ಮತ್ತು ಎಂಜಿನಿಯರ್ ಗಳ ಸಾಮರ್ಥ್ಯದ ಮೇಲೆ ನಮಗೆ ಪೂರ್ಣ ನಂಬಿಕೆ ಮತ್ತು ಭರವಸೆ ಇದೆ ಎಂದರು.
ಬುಲೆಟ್ ರೈಲು ಯೋಜನೆಯು ಭಾರತದ ಆಶಾದಾಯಕ ಅಭ್ಯುದಯದಲ್ಲಿ ಒಂದಾಗಿದೆ. ಆದರೆ ಟಿಎಂಸಿ ಇದನ್ನು ವಿಫಲ ಎಂದು ಬಣ್ಣಿಸುತ್ತಿರುವುದು ದುರದೃಷ್ಟಕರ ಎಂದು ಅವರು ಕಿಡಿಕಾರಿದರು.
ತಿಂಗಳಿಗೆ 8 ಕಿಮೀನಷ್ಟು ವೇಗದಲ್ಲಿ ಬುಲೆಟ್ ಟ್ರೈನ್ ಯೋಜನೆಗೆ ಸಂಬಂಧಿಸಿದಂತೆ ರೈಲು ಹಳಿ ಸಿದ್ಧವಾಗುತ್ತಿದೆ. ಇದು ಪಿಲ್ಲರ್ ಗಳು ಮತ್ತು ಎಲ್ಲಾ ಮುಖ್ಯ ನದಿಗಳಿಗೆ ಸೇತುವೆ ಕಟ್ಟುವ ಕಾಮಗಾರಿಯನ್ನೂ ಒಳಗೊಂಡಿದೆ. ಅಲ್ಲದೆ, ಈ ಕಾಮಗಾರಿಯನ್ನು ಮುಂದಿನ ದಿನಗಳಲ್ಲಿ ತಿಂಗಳಿಗೆ 10 ಕಿಮೀ ವೇಗದಲ್ಲಿ ಸಿದ್ಧಗೊಳಿಸುವ ಬಗ್ಗೆ ಕೇಂದ್ರ ಚಿಂತನೆ ನಡೆಸುತ್ತಿದೆ ಎಂದರು.