ಬೆಂಗಳೂರು, ಮಾ 18 (DaijiworldNews/DB): ರಾಜ್ಯದಲ್ಲಿ ಪಠ್ಯಪುಸ್ತಕಗಳಲ್ಲಿ ಭಗವದ್ಗೀತೆ ಅಳವಡಿಕೆ ಈ ವರ್ಷ ಇಲ್ಲ. ಆದರೆ ವಿದ್ಯಾರ್ಥಿಗಳಿಗೆ ಜ್ಞಾನದ ಜತೆ ಸಂಸ್ಕಾರ ಕಲಿಸುವ ಅಗತ್ಯದ ವಿಚಾರವಾಗಿ ಚರ್ಚೆ ನಡೆಯುತ್ತಿದೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಶುಕ್ರವಾರ ಮಾತನಾಡಿದ ಅವರು, ಪಠ್ಯಕ್ರಮದಲ್ಲಿ ಭಗವದ್ಗೀತೆ ಗುಜರಾತ್ ಮಾದರಿ ಎಂಬುದು ನನಗೆ ಗೊತ್ತಿಲ್ಲ. ಗುಜರಾತ್ ಮಾದರಿಯಲ್ಲಿ ರಾಜ್ಯದಲ್ಲಿಯೂ ಪಠ್ಯಪುಸ್ತಕಗಳಲ್ಲಿ ಭಗವದ್ಗೀತೆ ಅಳವಡಿಕೆ ಮಾಡುವ ಬಗ್ಗೆ ಭಾರಿ ಚರ್ಚೆ ಆರಂಭವಾಗಿದೆ. ಆದರೆ ಈ ವರ್ಷ ಅಂತಹ ಯಾವುದೇ ಯೋಚನೆ ನಮ್ಮ ಮುಂದಿಲ್ಲ ಎಂದರು.
ಈಗಿನ ಪುಸ್ತಕದಲ್ಲಿ ಜ್ಞಾನವಿದೆಯಾದರೂ ಸಂಸ್ಕಾರವಿಲ್ಲ ಎಂದು ಹಲವರು ಹೇಳುತ್ತಿದ್ದಾರೆ. ಮೌಲ್ಯಯುತ ಶಿಕ್ಷಣ ಅಳವಡಿಸುವಂತೆ ಹಲವರು ಬೇಡಿಕೆ ಇಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಶಿಕ್ಷಣ ತಜ್ಞರ ಜತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು.