ನವದೆಹಲಿ, ಮಾ 18 (DaijiworldNews/DB): ಬೆದರಿಕೆ ಕರೆಗಳು ಬರುತ್ತಿರುವ ಹಿನ್ನೆಲೆಯಲ್ಲಿ 'ದಿ ಕಾಶ್ಮೀರ್ ಫೈಲ್ಸ್' ಚಿತ್ರದ ನಿರ್ದೇಶಕ ವಿವೇಕ್ ರಂಜನ್ ಅಗ್ನಿಹೋತ್ರಿ ಅವರಿಗೆ ಕೇಂದ್ರ ಸರ್ಕಾರ 'ವೈ' ಶ್ರೇಣಿಯ ಭದ್ರತೆ ಒದಗಿಸಿದೆ.
ಚಿತ್ರ ಬಿಡುಗಡೆಯಾದ ದಿನದಿಂದಲೇ ನಿರ್ದೇಶಕರಿಗೆ ಬೆದರಿಕೆ ಕರೆಗಳು ಬರುತ್ತಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ 'ವೈ' ಶ್ರೇಣಿಯ ಭದ್ರತೆ ಒದಗಿಸಲಾಗಿದೆ. ಅವರಿಗೆ ಇನ್ನು ಎಲ್ಲೇ ಹೋಗುವುದಿದ್ದರೂ ಸಿಆರ್ಪಿಎಫ್ ಭದ್ರತೆ ಇರಲಿದೆ. ಇಬ್ಬರು ಕಮ್ಯಾಂಡೋಗಳು ಮತ್ತು ಪೊಲೀಸ್ ಸಿಬ್ಬಂದಿ ಸೇರಿದಂತೆ ಒಟ್ಟು 8 ಭದ್ರತಾ ಸಿಬ್ಬಂದಿಯನ್ನು ನಿರ್ದೇಶಕರ ಭದ್ರತೆಗೆ ನಿಯೋಜಿಸಲಾಗಿದೆ.
1990 ರಲ್ಲಿ ಕಾಶ್ಮೀರಿ ಪಂಡಿತರ ನರಮೇಧದ ಕಥೆಯನ್ನು ಆಧರಿಸಿರುವ ಚಿತ್ರ ಇದಾಗಿದ್ದು, ಚಿತ್ರದ ಬಗ್ಗೆ ದೇಶದಲ್ಲಿ ಪರ-ವಿರೋಧದ ಚರ್ಚೆಗಳು ನಡೆಯುತ್ತಿವೆ. ಕರ್ನಾಟಕ, ಗುಜರಾತ್, ಹರಿಯಾಣ, ಮಧ್ಯಪ್ರದೇಶದ ರಾಜ್ಯಗಳಲ್ಲಿ ಈ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಲಾಗಿದೆ. ಪ್ರಧಾನಿ ಮೋದಿ ಅವರೂ ಚಿತ್ರದ ಬಗ್ಗೆ ಮೆಚ್ಚುಗೆ ಸೂಚಿಸಿದ್ದರು.