ಬೆಂಗಳೂರು, ಮಾ 18 (DaijiworldNews/DB): ಇಟಲಿ ಮೂಲದವರನ್ನು ಮೆಚ್ಚಿಸುವುದಕ್ಕಾಗಿ ಡಿ.ಕೆ. ಶಿವಕುಮಾರ್ ಅವರು ನಾಟಕ ಮಾಡುತ್ತಿದ್ದಾರೆ. ಕಾಂಗ್ರೆಸ್ ಹಿಂದೂ ವಿರೋಧಿಯಾಗಿದೆ ಎಂದು ಬಿಜೆಪಿ ಟೀಕಿಸಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮತಾಂತರ ಬಿಲ್ ವಾಪಸ್ ಪಡೆಯುವುದಾಗಿ ಹೇಳಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಮತಾಂತರ ನಿಯಂತ್ರಣ ಕಾಯ್ದೆ ವಾಪಾಸ್ ಪಡೆಯುತ್ತೇವೆ ಎಂದು ಡಿಕೆಶಿ ಹೇಳಿದ್ದಾರೆ. ಅಂದರೆ ಹಿಂದೂಗಳನ್ನು ಮತಾಂತರ ಮಾಡಲೆಂದೇ ಕಾನೂನು ರೂಪಿಸುತ್ತೀರಾ ಎಂದು ಪ್ರಶ್ನಿಸಿದೆ.
ಇಟಲಿ ಮೂಲದವರನ್ನು ಮೆಚ್ಚಿಸುವುದಕ್ಕಾಗಿ ಈ ಸದಾರಮೆ ನಾಟಕವೇ? ಹಿಂದೂಗಳು ಮತಾಂತರವಾದರೂ ಪರವಾಗಿಲ್ಲ ಎನ್ನುವ ನಿಮ್ಮ ಹಿಂದೂ ವಿರೋಧಿ ನಿಲುವಿಗೆ ರಾಜ್ಯದ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಟೀಕೆ ಮಾಡಿದೆ.
ಅಲ್ಲದೆ, ಇನ್ನೊಂದು ಟ್ವೀಟ್ ನಲ್ಲಿ, ಕೆಪಿಸಿಸಿ ಅಧ್ಯಕ್ಷರಿಗೆ ತಮ್ಮದೇ ಕೋಟೆ ಕನಕಪುರ, ಕಪಾಲಿ ಬೆಟ್ಟ, ಹಾರೋಬೆಲೆ ವ್ಯಾಪ್ತಿಯಲ್ಲಿ ಮತಾಂತರದ ಪರವಾಗಿರುವವರ ಮತ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಮತಾಂತರದ ಪರವಾಗಿರುವವರ ಓಲೈಕೆಗಾಗಿ ಮತಾಂತರ ನಿಯಂತ್ರಣ ಕಾಯ್ದೆಯಂತಹ ಜನಸ್ನೇಹಿ ಕಾನೂನಿಗೆ ವಿರೋಧಿಸುತ್ತಿದ್ದೀರಿ ಅಲ್ಲವೇ ಎಂದು ಬಿಜೆಪಿ ವ್ಯಂಗ್ಯವಾಡಿದೆ.