ಬೆಂಗಳೂರು, ಮಾ 18 (DaijiworldNews/DB): ಹಿಜಾಬ್ ಮತ್ತು ಇತರ ಯಾವುದೇ ವಿಷಯಗಳಿಗಿಂತ ಮಕ್ಕಳ ಶಿಕ್ಷಣ ಮುಖ್ಯ. ತಾಯಿ ಹೃದಯದೊಂದಿಗೆ ಸರ್ಕಾರ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಮನವಿ ಮಾಡಿದ್ದಾರೆ.
ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದ ಅವರು, ಮಕ್ಕಳ ಹಾಲಿನಂತಹ ಮನಸ್ಸನ್ನು ಒಡೆಯಬಾರದು. ಮುಸ್ಲಿಂ ಹೆಣ್ಣು ಮಕ್ಕಳಿಗೆ ಸಮವಸ್ತ್ರದ ದುಪಟ್ಟಾವನ್ನು ತಲೆಯ ಸೆರಗಿನ ರೀತಿ ಧರಿಸಲು ಅವಕಾಶ ಕೊಟ್ಟರೆ ಸಮಸ್ಯೆ ಮುಗಿಯುತ್ತದೆ. ಆಗ ಸಮವಸ್ತ್ರ ಬಿಟ್ಟು ಬೇರೆ ಬಟ್ಟೆ ಧರಿಸುವ ಅವಶ್ಯಕತೆ ಬರುವುದಿಲ್ಲ ಎಂದರು.
ಹೈಕೋರ್ಟ್ ಹಿಜಾಬ್ ವಿಷಯದಲ್ಲಿ ನೀಡಿರುವ ತೀರ್ಪು ಪಾಲನೆ ಮಾಡುವುದು ಮುಖ್ಯ. ಎಲ್ಲಾ ರಾಜಕೀಯ ಪಕ್ಷಗಳು ಈ ನಿಟ್ಟಿನಲ್ಲಿ ಜವಾಬ್ದಾರಿಯಿಂದ ವರ್ತಿಸಬೇಕು. ವಿದ್ಯಾರ್ಥಿಗಳಿಗೆ ಮುಂದೆ ಭವಿಷ್ಯವಿದೆ. ಅವರ ಮನಸ್ಸಿನಲ್ಲಿ ದ್ವೇಷ ಹರಡದೆ, ಭವಿಷ್ಯ ರೂಪಿಸಲು ಸಲಹೆ ನೀಡಬೇಕು. ರಾಜಕೀಯ ಕಾರಣಕ್ಕೆ ಹುಟ್ಟಿಕೊಂಡ ಈ ಎಲ್ಲಾ ವಿವಾದಗಳಲ್ಲಿಯೂ ಮಕ್ಕಳೇ ಬಲಿಪಶುಗಳಾಗುತ್ತಾರೆ ಎಂದವರು ಆತಂಕ ವ್ಯಕ್ತಪಡಿಸಿದರು.
ಹಿಜಾಬ್ ವಿವಾದದ ಹಿಂದೆ ಕಾಣದ ಕೈಗಳಿವೆ ಎಂಬುದಾಗಿ ಹೈಕೋರ್ಟ್ ಹೇಳಿದೆ. ಆ ಕಾಣದ ಕೈಗಳನ್ನು ಸರಕಾರ ಪತ್ತೆ ಹಚ್ಚಿ ಹೆಸರು ಬಹಿರಂಗ ಪಡಿಸಬೇಕು ಎಂದು ಅವರು ಇದೇ ವೇಳೆ ಆಗ್ರಹಿಸಿದರು.