ಬೆಂಗಳೂರು, ಮಾ 18 (DaijiworldNews/DB): 'ಒಳ್ಳೆಯದಾದರೆ ನಂದು, ಕೆಟ್ಟದಾದರೆ ನಿಂದು’ ಎನ್ನುವ ಕೆಲವು ಮಂದಿ ಕಾಂಗ್ರೆಸ್ ನಲ್ಲಿ ಇದ್ದಾರೆ. ಸ್ವಹಿತವೇ ಇವರಿಗೆ ಧ್ಯೇಯವೇ ಹೊರತು ಪಕ್ಷದ ಬೆಳವಣಿಗೆಯಲ್ಲ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಆಪಾದಿಸಿದ್ದಾರೆ.
ನಗರದಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಕ್ಷದ ಬಗ್ಗೆ ಅಭಿಮಾನ ಇರುವವರು ಯಾರೂ ಈ ರೀತಿಯಾಗಿ ಮಾತನಾಡುವುದಿಲ್ಲ. ಸ್ವಹಿತವೇ ಕೆಲವರಿಗೆ ಮುಖ್ಯವಾಗಿದ್ದು ಅಂತಹವರು ಕೆಟ್ಟದಾದರೆ ಇನ್ನೊಬ್ಬರ ಮೇಲೆ ಹಾಕುತ್ತಾರೆ. ಒಳ್ಳೆಯದೇನಾದರೂ ಘಟಿಸಿದರೆ ಅದನ್ನು ಸ್ವಪ್ರತಿಷ್ಠೆಗೆ ಬಳಸಿಕೊಳ್ಳುತ್ತಾರೆ ಎಂದರು.
ಪಕ್ಷದಲ್ಲಿ ಅಧಿಕಾರ ಕೆಲವರಿಗೆ ಮುಖ್ಯವಾಗುತ್ತದೆ. ಆದರೆ ಆ ಅಧಿಕಾರ ಹಿಡಿಯಲು ಶಾಸಕರನ್ನು ಗೆಲ್ಲಿಸಿಕೊಡುವುದಿಲ್ಲ. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ನಾಯಕ ರಾಹುಲ್ ಗಾಂಧಿಯವರನ್ನು ಮೊನ್ನೆ ಮೊನ್ನೆವರೆಗೂ ಹೊಗಳುತ್ತಿದ್ದವರು, ಪಂಚರಾಜ್ಯ ಚುನಾವಣೆ ಸೋಲಿನ ಬಳಿಕ ತೆಗಳಲು ಶುರು ಮಾಡಿದ್ದಾರೆ. ಅದೇ ಗೆಲುವು ಸಿಗುತ್ತಿದ್ದರೆ ತಮ್ಮ ಶ್ರಮವನ್ನೂ ಹೇಳಿಕೊಳ್ಳುತ್ತಿದ್ದರು ಎಂದವರು ಇದೇ ವೇಳೆ ಆರೋಪ ಮಾಡಿದರು.