ಬೆಂಗಳೂರು, ಮಾ 18 (DaijiworldNews/DB): ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕ್ರಷರ್ ಮಾಲೀಕರಿಂದ ಲಂಚಕ್ಕೆ ಬೇಡಿಕೆ ಇಟ್ಟು ಮುಂಗಡ ಪಡೆದ ಆರೋಪ ಪ್ರಕರಣದಲ್ಲಿ ನಿಕಟಪೂರ್ವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಚೆನ್ನಣ್ಣನವರ್ ಅವರ ಪಾತ್ರ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬಿಜೆಪಿಯ ಎನ್. ರವಿಕುಮಾರ್ ಪ್ರಶ್ನೆಗೆ ಉತ್ತರಿಸಿದ ಅವರು, ದೂರು ಬಂದ ಹಿನ್ನೆಲೆಯಲ್ಲಿ ಐಜಿಪಿಯವರಿಂದ ತನಿಖೆ ನಡೆಸಲಾಗಿದೆ. ತನಿಖೆ ವೇಳೆ ರವಿ ಚೆನ್ನಣ್ಣವರ್ ಪಾತ್ರ ಇಲ್ಲ ಎಂಬುದಾಗಿ ತಿಳಿದು ಬಂದಿದೆ ಎಂದರು.
ಆದರೆ ವಿಜಯಪುರ ಸರ್ಕಲ್ ಇನ್ಸ್ ಪೆಕ್ಟರ್ ಟಿ. ಶ್ರೀನಿವಾಸ್, ಎಎಸ್ ಐಗಳಾದ ಎನ್. ಶುಭಾ, ಕೆ.ಜಿ. ಅನಿತಾ ಅವರ ವಿರುದ್ದವೂ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಈ ಅಧಿಕಾರಿಗಳನ್ನೂ ತನಿಖೆಗೆ ಒಳಪಡಿಸಲಾಗುತ್ತಿದೆ. ಕ್ರಶರ್ ಮಾಲೀಕರಿಗೆ ಸಹಾಯ ಮಾಡುವುದಾಗಿ ನಂಬಿಸಿ 5 ಲಕ್ಷ ರೂ. ಪಡೆದಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ಈ ನಿಟ್ಟಿನಲ್ಲಿ ಟಿ. ಶ್ರೀನಿವಾಸ್ ಅವರನ್ನು ಅಮಾನತುಗೊಳಿಸಲಾಗಿದ್ದು, ಎಎಸ್ ಐಗಳಿಬ್ಬರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗಿದೆ ಎಂದು ತಿಳಿಸಿದರು.
ಈ ವೇಳೆ ನನ್ನ ಬಳಿ ದಾಖಲೆ ಇದೆ ಎಂಬುದಾಗಿ ರವಿಕುಮಾರ್ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, ದಾಖಲೆಗಳನ್ನು ಒದಗಿಸಿದಲ್ಲಿ ಮತ್ತೆ ತನಿಖೆ ನಡೆಸಲಾಗುವುದು ಎಂದರು.