ಬೆಂಗಳೂರು, ಮಾ 17 (DaijiworldNews/DB): ಮೇಕೆದಾಟು ಯೋಜನೆ ಕುರಿತು ಚರ್ಚಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾರ್ಚ್ 18ರ ಶುಕ್ರವಾರದಂದು ಸರ್ವ ಪಕ್ಷಗಳ ಸಭೆ ಕರೆದಿದ್ದಾರೆ.
ಸಂಜೆ 4 ಗಂಟೆಗೆ ವಿಧಾನ ಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಭೆ ನಡೆಯಲಿದೆ. ಮೇಕೆದಾಟು ಯೋಜನೆಯ ಅಂತಿಮ ತೀರ್ಪು ಪ್ರಕಟಗೊಳ್ಳುವುದಕ್ಕಾಗಿ ಸರ್ಕಾರ ಕಾಯುತ್ತಿದೆ. ತೀರ್ಪು ರಾಜ್ಯದ ಪರವಾಗಿ ಬಂದರೆ ಕಾಮಗಾರಿ ಕೈಗೆತ್ತಿಕೊಳ್ಳುವ ಕುರಿತು ಈ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ.
ಮೇಕೆದಾಟು ಯೋಜನೆ ಜಾರಿಗೆ ಒತ್ತಾಯಿಸಿ ಪ್ರತಿಪಕ್ಷ ಕಾಂಗ್ರೆಸ್ ಈ ಹಿಂದೆ ಪಾದಯಾತ್ರೆಯನ್ನು ಹಮ್ಮಿಕೊಂಡು ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿತ್ತು. ಅದಾದ ಬಳಿಕ ಮುಖ್ಯಮಂತ್ರಿಗಳು 2022-23 ನೇ ಸಾಲಿನ ಬಜೆಟ್ ನಲ್ಲಿ ಮೇಕೆದಾಟು ಯೋಜನೆಗೆ 1000 ಕೋಟಿ ರೂ. ಮೀಸಲು ಇರಿಸಿರುವುದಾಗಿ ಘೋಷಿಸಿದ್ದರು. ಅಲ್ಲದೆ, ಸರ್ವಪಕ್ಷಗಳ ಸಭೆ ಕರೆಯುವುದಾಗಿ ಅಧಿವೇಶನದಲ್ಲಿ ಘೋಷಿಸಿದ್ದರು.