ಬೆಂಗಳೂರು, ಮಾ 17 (DaijiworldNews/DB): ನಿರ್ಮಾಣ ಹಂತದಲ್ಲಿರುವ ಬೆಂಗಳೂರಿನಿಂದ ಮೈಸೂರಿನವರೆಗಿನ 10 ಲೇನ್ ಗಳ ರಸ್ತೆ ಕಾಮಗಾರಿ ಈ ವಷಾಂತ್ಯಕ್ಕೆ ಪೂರ್ಣಗೊಳ್ಳಲಿದೆ ಎಂದು ಲೋಕೋಪಯೋಗಿ ಸಚಿವ ಸಿ. ಸಿ. ಪಾಟೀಲ್ ಹೇಳಿದ್ದಾರೆ.
ವಿಧಾನ ಪರಿಷತ್ ಕಲಾಪದ ವೇಳೆ ಶಾಸಕ ಮರಿತಿಬ್ಬೇ ಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದ ಮೊದಲ 10 ಲೇನ್ ಗಳ ರಸ್ತೆ ಎಂಬ ಹೆಗ್ಗಳಿಕೆಗೆ ಈ ರಸ್ತೆ ಪಾತ್ರವಾಗಲಿದೆ. ಕಾಮಗಾರಿ ಕ್ಷಿಪ್ರವಾಗಿ ನಡೆಯುತ್ತಿದ್ದು, ಡಿಸೆಂಬರ್ ವೇಳೆಗೆ ಮುಗಿಯಬಹುದು ಎಂದರು.
ಈ ರಸ್ತೆಗಳ ಗುಣಮಟ್ಟ ವೀಕ್ಷಿಸಲು ಪ್ರತ್ಯೇಕ ಸಮಿತಿ ರಚಿಸಲಾಗುವುದು. ಬೆಂಗಳೂರಿನಿಂದ ನಿಡಘಟ್ಟವರೆಗಿನ 56.20 ಕಿಮೀ ಉದ್ದದ ರಸ್ತೆ ಕಾಮಗಾರಿ ಮೇ ತಿಂಗಳಾಂತ್ಯಕ್ಕೆ ಮುಕ್ತಾಯಗೊಳ್ಳಲಿದೆ. ನಿಡಘಟ್ಟದಿಂದ ಮೈಸೂರುವರೆಗಿನ 61.104 ಕಿಮೀ ಉದ್ದದ ರಸ್ತೆ ಕಾಮಗಾರಿ ಸೆಪ್ಟಂಬರ್ ನಲ್ಲಿ ಮುಗಿಯಲಿದೆ. ಡಿಸೆಂಬರ್ ವೇಳೆಗೆ ಅಂತಿಮ ಹಂತದ ಕಾಮಗಾರಿ ಮುಗಿದು ರಸ್ತೆ ಸಂಚಾರಕ್ಕೆ ತೆರೆದುಕೊಳ್ಳಲಿದೆ ಎಂದು ತಿಳಿಸಿದರು.