ಬೆಂಗಳೂರು, ಮಾ 17 (DaijiworldNews/DB): ಮಹಾತ್ಮ ಗಾಂಧೀಜಿಯವರ ಪತ್ನಿ ಕಸ್ತೂರ ಬಾ ಅವರು ಕೂಡ ತಲೆಗೆ ಸೆರಗು ಹಾಕುತ್ತಿದ್ದರು. ತಲೆ ಮೇಲೆ ಸೆರಗಿನ ರೀತಿ ವಸ್ತ್ರ ಧರಿಸುವುದಕ್ಕೆ ಅವಕಾಶ ನೀಡಬಹುದು. ಅದನ್ನು ವಿವಾದ ಮಾಡುವ ಅವಶ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ವಿಧಾನಸೌಧದ ಎದುರು ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದ ಅವರು, ಕಸ್ತೂರ ಬಾ ಅವರು ತಲೆಗೆ ಸೆರಗು ಹಾಕುತ್ತಿದ್ದದ್ದನ್ನು ನಾವು ಫೋಟೋಗಳಲ್ಲಿ ನೋಡಿದ್ದೇವೆ. ಬಿಸಿಲಿನ ತಾಪಕ್ಕೆ ಹಿಂದೂ, ಮುಸ್ಲಿಂ ಹೆಣ್ಣುಮಕ್ಕಳು ಸಮವಸ್ತ್ರದೊಂದಿಗೆ ತಲೆಗೆ ದುಪ್ಪಟ್ಟ ಹಾಕುತ್ತಾರೆ. ಆದರೆ ಈಗ ವಿವಾದ ಮಾಡಲಾಗುತ್ತಿದೆ. ಹಿಜಾಬ್ ವಿಷಯದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂದರು.
ತಲೆ ಮೇಲೆ ದುಪಟ್ಟಾ ಧರಿಸುವುದನ್ನು ವಿವಾದ ಮಾಡುವುದನ್ನು ಬಿಟ್ಟು ಸರ್ಕಾರ ಸಮವಸ್ತ್ರಕ್ಕೆ ಪೂರಕವಾಗಿ ದುಪ್ಪಟ್ಟ ಹಾಕಿ ಬರುವುದಕ್ಕೆ ಅವಕಾಶ ಕಲ್ಪಿಸಲಿ. ಈ ವಿಚಾರವನ್ನು ವಿಧಾನಸಭೆಯಲ್ಲೂ ಪ್ರಸ್ತಾಪಿಸುತ್ತೇನೆ ಎಂದವರು ತಿಳಿಸಿದರು.