ನವದೆಹಲಿ, ಮಾ 17 (DaijiworldNews/MS): ಹರಿಯಾಣದ ಮಾಜಿ ಸಿಎಂ ಭೂಪಿಂದರ್ ಸಿಂಗ್ ಹೂಡಾ ಹಾಗೂ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಮಾತುಕತೆ ನಡೆಸಲಿದ್ದು , ಗಾಂಧಿ ಕುಟುಂಬ ಮತ್ತು ಜಿ23 ಗುಂಪಿನ ನಾಯಕರ ನಡುವಿನ ವೈಮನಸ್ಸಿನ ನಡುವೆ ಇವರಿಬ್ಬರ ಭೇಟಿ ಮಹತ್ವ ಪಡೆದಿದೆ.
ಭೂಪಿಂದರ್ ಸಿಂಗ್ ಹೂಡಾ ಅವರು ಗಾಂಧಿ ಕುಟುಂಬ ಮತ್ತು ಜಿ23 ಗುಂಪಿಗೆ ಹತ್ತಿರವಿರುವ ಏಕೈಕ ನಾಯಕರಾಗಿದ್ದಾರೆ. ಇತ್ತೀಚೆಗೆ ತಾನೆ ಗುಲಾಂ ನಬಿ ಆಜಾದ್ ಅವರ ಮನೆಯಲ್ಲಿ ಜಿ23 ಗುಂಪಿನ ಮುಖಂಡರ ಸಭೆ ನಡೆದಿದ್ದು, ಈ ಸಭೆಯಲ್ಲಿ ಭೂಪಿಂದರ್ ಸಿಂಗ್ ಹೂಡಾ ಕೂಡ ಭಾಗವಹಿಸಿದ್ದರು. ಹೀಗಾಗಿ ಇವರಿಬ್ಬರ ಭೇಟಿ ಕಾಂಗ್ರೆಸ್ ವಲಯದಲ್ಲಿ ಮಹತ್ವ ಪಡೆದುಕೊಂಡಿದೆ.
ಜಿ23 ಗುಂಪಿನ ಪ್ರಮುಖ ನಾಯಕರಲ್ಲಿ ಒಬ್ಬರಾಗಿರುವ ಕಾಂಗ್ರೆಸ್ ಹಿರಿಯ ನಾಯಕ ಕಪಿಲ್ ಸಿಬಲ್ , ಪಂಚ ರಾಜ್ಯಗಳಲ್ಲಿ ಸೋಲಿಗೆ ಗಾಂಧಿ ಕುಟುಂಬವೇ ಕಾರಣ ಎಂದು ಆರೋಪಿಸಿದ್ದರು.
ರಾಹುಲ್ ಗಾಂಧಿಯನ್ನು ಭೇಟಿಯಾದ ನಂತರ ಕಾಂಗ್ರೆಸ್ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಅವರನ್ನೂ ಭೂಪಿಂದರ್ ಸಿಂಗ್ ಹೂಡಾ ಭೇಟಿಯಾಗಲಿದ್ದಾರೆ ಎನ್ನುವ ಮಾಹಿತಿಯೂ ಹೊರಬಿದ್ದಿದೆ.