ಲಖನೌ, ಮಾ 17 (DaijiworldNews/DB): ಕಣಿವೆಯಲ್ಲಿ 'ದಿ ಕಾಶ್ಮೀರ್ ಫೈಲ್ಸ್' ನಿರ್ಮಿಸಲು ಸಾಧ್ಯವಾದರೆ, 'ಲಖಿಂಪುರ ಫೈಲ್ಸ್' ಚಿತ್ರವನ್ನೂ ನಿರ್ಮಿಸಬೇಕು. ಅದನ್ನೂ ದೇಶದ ಜನತೆಗೆ ತೋರಿಸುವ ಅಗತ್ಯವಿದೆ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಗುರುವಾರ ಮಾತನಾಡಿದ ಅವರು, ಕಳೆದ ಅಕ್ಟೋಬರ್ 3ರಂದು ಮೂರು ಕೃಷಿ ಕಾನೂನುಗಳ ವಿರುದ್ಧ ರೈತರು ಆಂದೋಲನ ನಡೆಸುತ್ತಿದ್ದ ವೇಳೆ ಲಖಿಂಪುರ ಖೇರಿಯಲ್ಲಿ ಹಿಂಸಾಚಾರ ಭೀಕರ ಸ್ವರೂಪ ಪಡೆದುಕೊಂಡಿತ್ತು. ಇದರಲ್ಲಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಪುತ್ರನ ಮಾಲೀಕತ್ವದ ಜೀಪ್ ನಾಲ್ವರು ರೈತರ ಸಾವಿಗೆ ಕಾರಣವಾಗಿತ್ತು. ರೈತರನ್ನು ಜೀಪಿನ ಚಕ್ರಕ್ಕೆ ಸಿಲುಕಿಸಿ ಅವರ ಸಾವಿಗೆ ಕಾರಣವಾದ ಕುರಿತು ’ಲಖೀಂಪುರ ಫೈಲ್ಸ್' ಚಿತ್ರವನ್ನು ಮಾಡಬೇಕು ಎಂದರು.
’ದಿ ಕಾಶ್ಮೀರ್ ಫೈಲ್ಸ್' 1990ರ ದಶಕದಲ್ಲಿ ಕಣಿವೆಯಿಂದ ಕಾಶ್ಮೀರಿ ಪಂಡಿತರ ನಿರ್ಗಮನವನ್ನು ಕೇಂದ್ರೀಕರಿಸಿ ಮಾಡಲಾಗಿದೆ. ಕಾಶ್ಮೀರ ಫೈಲ್ಸ್ ಗೆ ಉತ್ತರಪ್ರದೇಶ, ಮಧ್ಯಪ್ರದೇಶ, ಗುಜರಾತ್, ಕರ್ನಾಟಕ, ಹರಿಯಾಣ, ಗೋವಾ, ತ್ರಿಪುರಾ ಮತ್ತು ಉತ್ತರಾಖಂಡದಲ್ಲಿ ತೆರಿಗೆ ಮುಕ್ತ ಮಾಡಲಾಗಿದ್ದು, ಇಲ್ಲೆಲ್ಲಾ ಬಿಜೆಪಿ ಸರ್ಕಾರವಿದೆ. ಉತ್ತರ ಪ್ರದೇಶದಲ್ಲಿ ಹಣದುಬ್ಬರ, ನಿರುದ್ಯೋಗ ಮತ್ತು ಉತ್ತರ ಪ್ರದೇಶದ ಅಭಿವೃದ್ಧಿಯ ಮತ್ತೆ ಬಿಜೆಪಿ ಜನರ ಪ್ರಶ್ನೆಗಳಿಗೆ ಉತ್ತರಿಸುವ ದಿನ ಬರಲಿದೆ ಎಂದವರು ತಿಳಿಸಿದರು.