ಪಂಜಾಬ್, ಮಾ 17 (DaijiworldNews/DB): ಮುಂದಿನ ತಿಂಗಳು ನಡೆಯುವ ಪಂಜಾಬ್ ರಾಜ್ಯಸಭಾ ಚುನಾವಣೆಯಲ್ಲಿ ಭಾರತ ತಂಡದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಕಣಕ್ಕಿಳಿಯುವ ಸಾಧ್ಯತೆ ಇದೆ.
ಹರ್ಭಜನ್ ಸಿಂಗ್ ಪಂಜಾಬ್ ನಿಂದ ರಾಜ್ಯ ಸಭೆಗೆ ಪ್ರವೇಶಿಸಲಿದ್ದಾರೆ ಎಂಬುದಾಗಿ ಆಮ್ ಆದ್ಮಿ ಪಕ್ಷ ಪ್ರಕಟಿಸಿದೆ. ಆದರೆ ಚುನಾವಣೆ ನಡೆದ ಬಳಿಕವಷ್ಟೇ ಇದು ಅಧಿಕೃತವಾಗಲಿದೆ. ಮುಂದಿನ ತಿಂಗಳು ರಾಜ್ಯಸಭಾ ಚುನಾವಣೆ ನಡೆಯಲಿದ್ದು, ಆಮ್ ಆದ್ಮಿ 5 ಸ್ಥಾನಗಳನ್ನು ಪಡೆಯುವ ವಿಶ್ವಾಸದಲ್ಲಿದೆ. ಈ ಪೈಕಿ ಒಂದು ಸ್ಥಾನ ಹರ್ಭಜನ್ ಸಿಂಗ್ ಗೆ ನೀಡಲಿದೆ ಎಂದು ಪಕ್ಷ ಹೇಳಿದೆ.
ಹರ್ಭಜನ್ ಸಿಂಗ್ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ನೇಮಕ ಮಾಡುವ ಜೊತೆಗೆ ರಾಜ್ಯದ ಕ್ರೀಡಾ ಸಂಸ್ಥೆಗಳ ಜವಾಬ್ದಾರಿ ವಹಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಪಂಜಾಬ್ ನೂತನ ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಶುಭಕೋರಿ ಹರ್ಭಜನ್ ಸಿಂಗ್ ಕೆಲ ದಿನಗಳ ಹಿಂದಷ್ಟೇ ಟ್ವೀಟ್ ಮಾಡಿದ್ದರು.