ಹಾವೇರಿ, ಮಾ 17 (DaijiworldNews/DB): ಉಕ್ರೇನ್ ನಲ್ಲಿ ಅರ್ಧದಲ್ಲೇ ಶಿಕ್ಷಣ ಮೊಟಕುಗೊಳಿಸಿರುವವರಿಗೆ ಉಕ್ರೇನ್ ಮೇಲೆ ರಷ್ಯಾ ನಡೆಸಿದ ದಾಳಿಯಲ್ಲಿ ಮೃತಪಟ್ಟ ಹಾವೇರಿಯ ವೈದ್ಯಕೀಯ ವಿದ್ಯಾರ್ಥಿ ನವೀನ್ ಗ್ಯಾನಗೌಡರ್ ಹೆಸರಿನಲ್ಲಿ ನೆರವು ನೀಡುವುದಾಗಿ ಯುವ ಕಾಂಗ್ರೆಸ್ ಮುಖಂಡ ಎಂ.ಎಸ್. ರಕ್ಷಾ ರಾಮಯ್ಯ ಹೇಳಿದ್ದಾರೆ.
ಹಾವೇರಿಯಲ್ಲಿ ನವೀನ್ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಗುರುವಾರ ಸಾಂತ್ವನ ಹೇಳಿದ ಅವರು, ಉಕ್ರೇನ್ ನಿಂದ ವಾಪಸಾದ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಮುಂದುವರಿಸಲು ಹಣಕಾಸಿನ ನೆರವು ಅಗತ್ಯವಾಗಿದೆ. ತೀರಾ ಅಗತ್ಯವಿರುವವರನ್ನು ಗುರುತಿಸಿ ಅವರಿಗೆ ನವೀನ್ ಹೆಸರಿನಲ್ಲಿ ನೆರವು ನೀಡಲಾಗುವುದು ಎಂದರು.
ನವೀನ್ ಸಾವು ಎಲ್ಲರಿಗೂ ರಾಜ್ಯಾದ್ಯಂತ ಎಲ್ಲರಿಗೂ ದುಃಖದ ವಿಷಯವಾಗಿದೆ. ನವೀನ್ ಮೃತ ದೇಹವನ್ನು ಸ್ವದೇಶಕ್ಕೆ ತರಲು ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುವುದು. ಅಲ್ಲದೆ ಅವರ ಹೆಸರಿನಲ್ಲಿ ರಚನಾತ್ಮಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.