ಮಧ್ಯಪ್ರದೇಶ, ಮಾ 17 (DaijiworldNews/DB): ಭೋಪಾಲ್ನಿಂದ ಹೈದರಾಬಾದ್ಗೆ ತೆರಳುತ್ತಿದ್ದ ಬಸ್ಗೆ ಎನ್ಎಚ್ 69ರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಚಾಲಕನ ಸಮಯಪ್ರಜ್ಞೆಯಿಂದ ಸಂಭಾವ್ಯ ಭಾರೀ ಅವಘಡ ತಪ್ಪಿದೆ.
ಸಾಂದರ್ಭಿಕ ಚಿತ್ರ
ಬಸ್ ಗೆ ಬೆಂಕಿ ಹೊತ್ತಿಕೊಂಡಿರುವುದು ತಿಳಿಯುತ್ತಿದ್ದಂತೆ ಬಸ್ ನಲ್ಲಿದ್ದ 60 ಪ್ರಯಾಣಿಕರನ್ನು ಚಾಲಕ ಸುರಕ್ಷಿತವಾಗಿ ಕೆಳಗಿಳಿಸಿದ್ದಾನೆ. ಬೆತುಲ್ ಜಿಲ್ಲಾ ಕೇಂದ್ರದಿಂದ 25 ಕಿ.ಮೀ ದೂರದಲ್ಲಿರುವ ರಾಷ್ಟ್ರೀಯ ಹೆದ್ದಾರಿ 69 ರಲ್ಲಿ ಈ ಘಟನೆ ಸಂಭವಿಸಿದ್ದು, ಘಟನೆಯಲ್ಲಿ ಯಾವುದೇ ಸಾವು ನೋವು ವರದಿಯಾಗಿಲ್ಲ. ಆದರೆ ಅಪಘಾತದಲ್ಲಿ, ಬಸ್ ಸಂಪೂರ್ಣವಾಗಿ ಸುಟ್ಟು ಹೋಗಿದೆ. ಬಸ್ನಲ್ಲಿ ಬೆಂಕಿ ಹೊತ್ತಿಳ್ಳಲು ಕಾರಣವೇನು ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ಘಟನೆ ಕುರಿತಂತೆ ಶಹಾಪುರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಶಿವನಾರಾಯಣ್ ಮುಕಾಟಿ ಅವರು ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿ, ಬುಧವಾರ ರಾತ್ರಿ 10 ಗಂಟೆ ಸುಮಾರಿಗೆ ಬಸ್ ಗೆ ಬೆಂಕಿ ಹೊತ್ತಿಕೊಂಡಿದೆ. ಹೊಗೆ ಏರಿದ ಕೂಡಲೇ ಪ್ರಯಾಣಿಕರನ್ನು ಚಾಲಕ ಬಸ್ ನಿಂದ ಇಳಿಸಿದ ಕಾರಣ ಯಾವುದೇ ಪ್ರಯಾಣಿಕನಿಗೆ ಗಾಯಗಳಾಗಿಲ್ಲ. ಆದರೆ ಬಸ್ ನಲ್ಲಿದ್ದ ಪ್ರಯಾಣಿಕರ ಲಗೇಜ್, ಬ್ಯಾಗ್ ಗಳು ಬೆಂಕಿಗೆ ಆಹುತಿಯಾಗಿವೆ. ಟಯರ್ ಸ್ಪೋಟದಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಅವಘಡ ಸಂಭವಿಸಿದ ತತ್ ಕ್ಷಣ ಅಗ್ನಿಶಾಮಕ ದಳದವರು ಬಂದು ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಆದರೆ ಈ ವೇಳೆಗಾಗಲೇ ಬಸ್ ಸಂಪೂರ್ಣ ಬೆಂಕಿ ಆವರಿಸಿತ್ತು ಎಂಬುದಾಗಿ ವರದಿಗಳು ತಿಳಿಸಿವೆ.