ಬೆಂಗಳೂರು, ಮಾ 17 (DaijiworldNews/DB): ರಷ್ಯಾ-ಉಕ್ರೈನ್ ನಡುವಿನ ಯುದ್ಧ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಕರ್ನಾಟಕದ ಸಮುದ್ರ ಗಡಿ ಜಿಲ್ಲೆಗಳಿಗೆ ಮಿಸೈಲ್ ಬಡಿದರೆ ಬೆಂಕಿ ನಂದಿಸಲು ಸರಿಯಾದ ಅಗ್ನಿ ಸುರಕ್ಷತೆಯ ವ್ಯವಸ್ಥೆಗಳು ಇಲ್ಲ ಎಂದ ಜೆಡಿಎಸ್ ಸದಸ್ಯ ಬಿ.ಎಂ. ಫಾರೂಖ್ ಆತಂಕ ವ್ಯಕ್ತಪಡಿಸಿದ್ದಾರೆ.
ರಾಜ್ಯ ವಿಧಾನ ಪರಿಷತ್ ನಲ್ಲಿಂದು ಬಜೆಟ್ ಚರ್ಚೆ ವೇಳೆ ಮಾತನಾಡಿದ ಅವರು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಸೇರಿ ಕರ್ನಾಟಕದ ಮೂರು ಜಿಲ್ಲೆಗಳು ಸಮುದ್ರದ ಗಡಿಯನ್ನು ಹಂಚಿಕೊಳ್ಳುತ್ತವೆ. ರಷ್ಯಾ-ಉಕ್ರೇನ್ ಸಮರ ಹೆಚ್ಚುತ್ತಲೇ ಇದ್ದು, ದುರದೃಷ್ಟವಶಾತ್ ಆ ಕಡೆಯಿಂದ ಮಿಸೈಲ್ ಹೊಡೆದಲ್ಲಿ ಬೆಂಕಿ ನಂದಿಸಲು ಸರಿಯಾದ ಫೈರ್ ಸೇಫ್ಟಿ ವ್ಯವಸ್ಥೆ ಈ ಮೂರೂ ಜಿಲ್ಲೆಗಳಲ್ಲಿ ಇಲ್ಲ ಎಂದರು.
ಮಂಗಳೂರು ವಿಮಾನ ನಿಲ್ದಾಣದಲ್ಲಿಯೂ ಸರಿಯಾದ ವ್ಯವಸ್ಥೆ ಇಲ್ಲ. ಕರಾವಳಿಯಲ್ಲಿ ಡಾಟಾ ಸೆಂಟರ್ ಮಾಡಬೇಕು. ಇಲ್ಲಿ ಸಾಕಷ್ಟು ಪರಿಣಣತರಿದ್ದು, ಈ ಕೆಲಸಕ್ಕೆ ಅವರ ಸೇವೆ ಪಡೆಯಿರಿ ಎಂದು ಸಲಹೆ ನೀಡಿದರು.
ಪ್ರತಿ ಬಾರಿ ಕಡಲ್ಕೊರತೆ ತಡೆಗೆ ಸಮುದ್ರಕ್ಕೆ ಕಲ್ಲು ಹಾಕಿ ಸಾವಿರಾರು ಕೋಟಿ ರೂಪಾಯಿ ಹಣ ಪೋಲು ಮಾಡಲಾಗುತ್ತದೆ. ಮರು ವರ್ಷ ಮತ್ತೆ ಕಡಲ್ಕೊರೆತ ಯಥಾಪ್ರಕಾರ ಸಾಗುತ್ತದೆ. ಇದರ ಬದಲಾಗಿ ಕಡಲ್ಕೊರೆತ ತಡೆಗೆ ಶಾಶ್ವತ ವ್ಯವಸ್ಥೆಯಾದರೆ ಪ್ರತಿ ಬಾರಿ ಹಣ ವ್ಯಯಿಸುವ ಅವಶ್ಯವೇ ಬರುವುದಿಲ್ಲ. ವಿದೇಶದಲ್ಲೆಲ್ಲ ನಡುಗಡ್ಡೆ ರೀತಿಯಲ್ಲಿ ಸಮುದ್ರ ತೀರದಲ್ಲಿ ವೈಜ್ಞಾನಿಕವಾಗಿ ತಡೆಯಲಾಗುತ್ತಿದೆ. ಸಮುದ್ರ ತೀರದುದ್ದಕ್ಕೂ ಗಾರ್ಡನ್ ಮಾಡಲಾಗುತ್ತದೆ. ಆ ತಂತ್ರಜ್ಞಾನವನ್ನು ಇಲ್ಲೂ ಅಳವಡಿಸಬಹುದು ಎಂದು ಅವರು ತಿಳಿಸಿದರು.
ಗೋವಾ ರಾಜ್ಯದಲ್ಲಿ ಶೇ. 23ರಷ್ಟು ಆದಾಯ ಪ್ರವಾಸೋದ್ಯಮದಿಂದ ಬರುತ್ತದೆ. ಕರ್ನಾಟಕದಲ್ಲಿಇದರ ಪ್ರಮಾಣ ಶೇ. 2-3 ಅಷ್ಟೇ. ಕರಾವಳಿಯಲ್ಲಿ ಸಾಕಷ್ಟು ಪುಣ್ಯ ಕ್ಷೇತ್ರಗಳಿವೆ. ಅವುಗಳನ್ನು ಅಭಿವೃದ್ಧಿಪಡಿಸಿ ಪ್ರವಾಸೋದ್ಯಮಕ್ಕೂ ಒತ್ತು ನೀಡಬೇಕು ಎಂದು ಬಿಎಂ ಫಾರೂಖ್ ಮನವಿ ಮಾಡಿದರು.