ಪಂಜಾಬ್, ಮಾ 17 (DaijiworldNews/HR): ಆಮ್ ಆದ್ಮಿ ಪಕ್ಷದ ಭಗವಂತ್ ಮಾನ್ ಸಿಂಗ್ ಬುಧವಾರ ಪಂಜಾಬ್ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದ್ದು, ಈ ವೇಳೆ 7 ವರ್ಷಗಳ ಹಿಂದೆ ಜಗಳವಾಡಿಕೊಂಡು ಮನೆಯಿಂದ ನಾಪತ್ತೆಯಾಗಿದ್ದ ಮಗ ಪತ್ತೆಯಾಗಿದ್ದಾನೆ.
ಫರೀದ್ಕೋಟ್ನ ಶೇರ್ ಸಿಂಗ್ ವಾಲಾ ಗ್ರಾಮದ ನಿವಾಸಿ ಜಸ್ವಿಂದರ್ ಸಿಂಗ್ 19 ವರ್ಷದವರಾಗಿದ್ದಾಗ ನಾಪತ್ತೆಯಾಗಿದ್ದು, ಇದೀಗ 7 ವರ್ಷಗಳ ಬಳಿಕ ಪತ್ತೆಯಾಗಿದ್ದಾನೆ.
ಭಗವಂತ್ ಮಾನ್ ಪಂಜಾಬ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕಾಗಿ ಗುತ್ತಿಗೆ ಪಡೆದ ಟೆಂಟ್ ಗುತ್ತಿಗೆದಾರರೊಂದಿಗೆ ಜಸ್ವಿಂದರ್ ಕೆಲಸ ಮಾಡುತ್ತಿದ್ದು, ಜಿಲ್ಲಾ ಪೊಲೀಸರು ಸ್ಥಳದಲ್ಲಿ ಕೆಲಸ ಮಾಡುವ ಎಲ್ಲ ಜನರ ಪರಿಶೀಲನೆಯ ಸಮಯದಲ್ಲಿ ಯಾವುದೇ ಗುರುತಿನ ಪುರಾವೆಗಳನ್ನು ನೀಡಲು ವಿಫಲವಾದಾಗ ಅವರ ವಿವರಗಳನ್ನು ದೃಢೀಕರಣಕ್ಕಾಗಿ ಫರೀದ್ಕೋಟ್ ಜಿಲ್ಲೆಯ ಸಾದಿಕ್ ಪೊಲೀಸ್ ಠಾಣೆಗೆ ಕಳುಹಿಸಲಾಗಿತ್ತು.
ಇನ್ನು ಮೆಟ್ರಿಕ್ಯುಲೇಟ್ ಆಗಿರುವ ಜಸ್ವಿಂದರ್ ಮನೆಯಿಂದ ಅಮೃತಸರಕ್ಕೆ ಹೋಗಿ ಕೆಲವು ತಿಂಗಳು ದಿನಗೂಲಿ ಕೆಲಸ ಮಾಡಿದ್ದು, ಬಳಿಕ ರಾಜಕೀಯ ಸಭೆಗಳು ಮತ್ತು ಮದುವೆಗಳು ಸೇರಿದಂತೆ ಸಮಾರಂಭಗಳಲ್ಲಿ ಟೆಂಟ್ಗಳನ್ನು ಹಾಕುವ ಗುತ್ತಿಗೆದಾರರೊಂದಿಗೆ ಕೆಲಸ ಮಾಡುತ್ತಿದ್ದು, ನಾನು ಆರು ವರ್ಷಗಳಿಂದ ಅವರೊಂದಿಗೆ ಕೆಲಸ ಮಾಡುತ್ತಿದ್ದೇನೆ ಮತ್ತು ಕಳೆದ ಐದು ದಿನಗಳಿಂದ ಖಟ್ಕರ್ ಕಲಾನ್ ಸ್ಥಳದಲ್ಲಿ ವ್ಯವಸ್ಥೆ ಮಾಡುತ್ತಿದ್ದೇನೆ ಎಂದು ಜಸ್ವಿಂದರ್ ಸಿಂಗ್ ತಿಳಿಸಿದ್ದಾರೆ.