ಬೆಂಗಳೂರು, ಮಾ. 16 (DaijiworldNews/SM): ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ತಾಳ್ಮೆಯ ವ್ಯಕ್ತಿಯಾಗಿದ್ದಾರೆ ಎಂದು ಪ್ರತಿಪಕ್ಷದ ಉಪನಾಯಕ ಯು.ಟಿ. ಖಾದರ್ ಸದನದಲ್ಲಿ ಹೇಳಿದ್ದಾರೆ.
ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎನ್ನುವ ವಿಚಾರಕ್ಕೆ ಸಂಬಂಧಿಸಿದ ನಿಲುವಳಿ ಸೂಚಿಸಿ ಮಾತು ಆರಂಭಿಸಿದ ಯು.ಟಿ. ಖಾದರ್ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಹೇಳಿದರು. ಹಾಗೂ ಶಿವಮೊಗ್ಗ ಸೇರಿದಂತೆ ಇತರ ಘಟನೆಗಳನ್ನು ಪ್ರಸ್ತಾಪಿಸಿದರು. ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಕಾನೂನು ಸಚಿವ ಮಾಧುಸ್ವಾಮಿ ನಿಲುವಳಿಯಲ್ಲಿ ಈ ವಿಚಾರಕ್ಕೆಲ್ಲ ಅವಕಾಶವಿದೆಯೇ ಎಂದು ಸ್ಪೀಕರ್ ಅವರನ್ನು ಪ್ರಶ್ನಿಸಿ, ಅಂತಹ ಮನವಿಗಳನ್ನು ತಾವು ತಿರಸ್ಕರಿಸಬೇಕೆಂದು ಸೂಚಿಸಿದರು.
ಈ ನಡುವೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಇರುವ ಅವಕಾಶಗಳು ಹಾಗೂ ನಿಯಮವನ್ನು ಸಭೆಗೆ ತಿಳಿಸಿದರು.
ಬಳಿಕ ಮಾತು ಮುಂದುವರೆಸಿದ ಪ್ರತಿಪಕ್ಷ ಉಪನಾಯಕ ಯು.ಟಿ. ಖಾದರ್, ಮಾಜಿ ಸಿಎಂ ಯಡಿಯೂರಪ್ಪ ಅತ್ಯಂತ ತಾಳ್ಮೆಯ ವ್ಯಕ್ತಿಯಾಗಿದ್ದಾರೆ. ಆದರೆ, ಮಾಧುಸ್ವಾಮಿಯವರಲ್ಲಿ ತಾಳ್ಮೆಯೇ ಇಲ್ಲ. ಯಡಿಯೂರಪ್ಪರವರಂತೆಯೇ ಮಾಧುಸ್ವಾಮಿ ಕೂಡ ತಾಳ್ಮೆ ಮೈಗೂಡಿಸಿಕೊಳ್ಳಬೇಕೆಂದರು.