ಕೋಲ್ಕತ್ತಾ, ಮಾ 16 (DaijiworldNews/MS): ಪಂಚರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ನಾಲ್ಕು ರಾಜ್ಯದಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದರೂ, "ಆಟ ಇನ್ನೂ ಮುಗಿದಿಲ್ಲ "ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸವಾಲೆಸಿದಿದ್ದಾರೆ.
ದೇಶಾದ್ಯಂತ ಒಟ್ಟು ಶಾಸಕರ ಅರ್ಧದಷ್ಟು ಸಂಖ್ಯೆಯನ್ನೂ ಹೊಂದಿರದ ಬಿಜೆಪಿ ಈಗಲೇ ಬಡಾಯಿ ಕೊಚ್ಚಿಕೊಳ್ಳಬಾರದು. ಸಮಾಜವಾದಿ ಪಕ್ಷದಂತಹ ಪಕ್ಷಗಳು ವಿಧಾನಸಭಾ ಚುನಾವಣೆಯಲ್ಲಿ ಸೋತರೂ ಕಳೆದ ಬಾರಿಗಿಂತ ಬಲಿಷ್ಠವಾಗಿವೆ. ಹೀಗಾಗಿ ಮುಂಬರುವ ರಾಷ್ಟ್ರಪತಿ ಚುನಾವಣೆಯಲ್ಲಿ ಗೆಲುವು ಬಿಜೆಪಿ ಸುಲಭವಲ್ಲ ಎಂದು ಬ್ಯಾನರ್ಜಿ ಹೇಳಿದ್ದಾರೆ.
ವಿರೋಧ ಪಕ್ಷಗಳು ಒಟ್ಟಾಗಿ ರಾಷ್ಟ್ರದಾದ್ಯಂತ ಹೆಚ್ಚು ಶಾಸಕರನ್ನು ಹೊಂದಿವೆ. ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸೋತ ಸಮಾಜವಾದಿ ಪಕ್ಷದಂತಹ ಪಕ್ಷಗಳು ಕಳೆದ ಬಾರಿಗಿಂತ ಹೆಚ್ಚಿನ ಶಾಸಕರನ್ನು ಹೊಂದಿವೆ. ಹೀಗಾಗಿ "ಆಟ ಇನ್ನೂ ಮುಗಿದಿಲ್ಲ" ಎಂದು ಹೇಳಿದ್ದಾರೆ.
ಸಂವಿಧಾನದ ವಿಧಿ 54ರ ಪ್ರಕಾರ ರಾಷ್ಟ್ರಪತಿ ಚುನಾವಣೆ ನಡೆಯುತ್ತದೆ. ಸಂಸತ್ತಿನ ಉಭಯ ಸದನಗಳಾದ ಲೋಕಸಭೆ, ರಾಜ್ಯಸಭೆ ಸಂಸದರು, ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಲ್ಲಿರುವ ವಿಧಾನಸಭೆ ಸದಸ್ಯರಿಂದ ಮತದಾನ ನಡೆಯುತ್ತದೆ. ವಿಧಾನಪರಿಷತ್ ಸದಸ್ಯರು, ನಾಮಕರಣಗೊಂಡ ಸಂಸದರು, ಶಾಸಕರಿಗೆ ಮತದಾನದ ಹಕ್ಕಿಲ್ಲ. ರಾಷ್ಟ್ರಪತಿ ಹುದ್ದೆಯ ಅಭ್ಯರ್ಥಿಗೆ ನಾಮಪತ್ರ ಸಲ್ಲಿಕೆ ವೇಳೆ 50 ಮಂದಿ ಮತದಾರರು ಸೂಚಕರಾಗಿ, 50 ಮಂದಿ ಅನುಮೋದಕರಾಗಿ ಸಹಿ ಮಾಡಬೇಕಾಗುತ್ತದೆ.
1971 ರಲ್ಲಿ ರಾಜ್ಯದ ಜನಸಂಖ್ಯೆಯನ್ನು ಗಣನೆಗೆ ತೆಗೆದುಕೊಳ್ಳುವ ಸೂತ್ರದ ಮೂಲಕ ರಾಜ್ಯ ಶಾಸಕಾಂಗಗಳಿಂದ ಪ್ರತಿ ಮತದಾರನ ಮತಗಳ ಸಂಖ್ಯೆ ಮತ್ತು ಮೌಲ್ಯವನ್ನು ರೂಪಿಸಲಾಗಿದೆ.