ಬೆಂಗಳೂರು, ಮಾ 16 (DaijiworldNews/DB): ‘ದಿ ಕಾಶ್ಮೀರ್ ಫೈಲ್ಸ್’ ಚಲನಚಿತ್ರ ವೀಕ್ಷಣೆಗೆ ಪರಿಷತ್ ಸದಸ್ಯರಿಗೆ ಆಹ್ವಾನ ನೀಡಿದ ಸರ್ಕಾರದ ಪ್ರಕಟಣೆ ಸಂಬಂಧ ಕಾಗ್ರೆಸ್ ಅಸಮಾಧಾನ ವ್ಯಕ್ತಪಡಿಸಿ, ಸದನದಲ್ಲಿ ತೀವ್ರ ಗದ್ದಲ ಸೃಷ್ಟಿಯಾದ ಪ್ರಸಂಗ ಮಂಗಳವಾರ ನಡೆಯಿತು.
ಸಾಂದರ್ಭಿಕ ಚಿತ್ರ
ಪ್ರಕಟನೆ ಉಲ್ಲೇಖಿಸಿದ ಸಭಾಪತಿ ಬಸವರಾಜ ಹೊರಟ್ಟಿಯವರು, ಸಂಜೆ ಮಲ್ಟಿಪ್ಲೆಕ್ಸ್ನಲ್ಲಿ ಚಲನಚಿತ್ರವನ್ನು ಪ್ರದರ್ಶಿಸಲಾಗುವುದು. ಆಸಕ್ತರು ಚಿತ್ರ ವೀಕ್ಷಣೆ ಮಾಡಬಹುದು ಎಂದರು.
ಕೂಡಲೇ ಎದ್ದು ನಿಂತ ಕಾಂಗ್ರೆಸ್ ಸದಸ್ಯ ಸಲೀಂ ಅಹ್ಮದ್, ಬಜೆಟ್ ಮೇಲಿನ ಚರ್ಚೆ ನಡೆಸುವುದನ್ನು ಬಿಟ್ಟು ಸಿನಿಮಾ ತೋರಿಸುವುದರ ಬಗ್ಗೆ ಮಾತನಾಡುವುದು ಸರಿಯಲ್ಲ. ಸಭಾಪತಿ ಪೀಠದಿಂದ ಇಂತಹ ಪ್ರಕಟಣೆ ಬರಬಾರದಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಎಸ್.ಟಿ. ಸೋಮಶೇಖರ್, ಆಸಕ್ತರು ಸಿನಿಮಾ ವೀಕ್ಷಿಸಬಹುದೇ ಹೊರತು ಕಡ್ಡಾಯವಿಲ್ಲ ಎಂದರು.
ಪ್ರತಿಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ ಅವರು ಫರ್ಜಾನಾ ಮತ್ತು ವಾಟರ್ ಎಂಬ ಎರಡು ಸಿನಿಮಾ ಇದೆ. ಅಲ್ಲದೆ, ಗುಜರಾತ್ ಫೈಲ್ಸ್ ಕೂಡ ತೋರಿಸಿ ಎಂದು ಹೇಳಿದರು.
ಸಭಾಪತಿಯವರು ಪ್ರಕಟಣೆ ವಾಪಸ್ ಪಡೆಯಬೇಕೆಂದು ಆಗ್ರಹಿಸಿ ಸಭಾಪತಿಗಳ ಮುಂದೆ ಕಾಂಗ್ರೆಸ್ ಸದಸ್ಯರು ಪ್ರತಿಭಟಿಸಿದರು. ಇದಕ್ಕೆ ಬಿಜೆಪಿ ಸದಸ್ಯರು ಪ್ರತಿಕ್ರಿಯಿಸಿ, ಕಾಶ್ಮೀರ್ ಫೈಲ್ಸ್ ಚಿತ್ರವನ್ನು ಭಾರತದಲ್ಲಿ ತೋರಿಸದೇ ಪಾಕಿಸ್ತಾನದಲ್ಲಿ ತೋರಿಸಲು ಆಗುತ್ತದೆಯೇ ಎಂದು ತಿರುಗೇಟು ನೀಡಿದರು. ಎರಡೂ ಪಕ್ಷಗಳ ಸದಸ್ಯರ ನಡುವೆ ಗದ್ದಲ ಉಂಟಾದ ಹಿನ್ನೆಲೆಯಲ್ಲಿ ಕಲಾಪವನ್ನು ಸಭಾಪತಿಗಳು ಕೆಲಕಾಲ ಮುಂದೂಡಿದದರು. ಬಳಿಕ ಸಂಧಾನ ಸಭೆ ನಡೆಸಿದರು.