ವಿಧಾನಸಭೆ, ಮಾ 16 (DaijiworldNews/DB): ಕೇಂದ್ರ ಸರಕಾರ ನಾಲ್ಕು ಸಾವಿರ ಕೋಟಿ ರೂ. ಹೆಚ್ಚುವರಿ ಸಾಲ ತೆಗೆದುಕೊಳ್ಳುವುದಕ್ಕೆ ಅವಕಾಶ ನೀಡಿದರೂ ನಾವು ತೆಗೆದುಕೊಂಡಿಲ್ಲ. ಸಾಲ ಮಾಡಿ ಹೋಳಿಗೆ ತಿನ್ನುವ ಮಂದಿ ನಾವಲ್ಲ, ಅದರ ಬದಲು ರೊಟ್ಟಿ ತಿನ್ನುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
'ಬೊಮ್ಮಾಯಿ ಸಾಲ ಮಾಡಿ ತುಪ್ಪ ತಿಂದಿದ್ದಾರೆ' ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆಗೆ ತಿರುಗೇಟು ನೀಡಿದ ಅವರು, ಕೇಂದ್ರದಿಂದ ನಮಗೆ 12990 ಕೋಟಿ ರೂ. ಜಿಎಸ್ ಟಿ ಪರಿಹಾರ ಬರಲು ಬಾಕಿ ಇದ್ದು, ಸದ್ಯದಲ್ಲೇ ಸಿಗಲಿದೆ. ಅಲ್ಲದೆ, ಈಗಾಗಲೇ ಜಿಎಸ್.ಟಿ ಪರಿಹಾರ ನಿಧಿಯಿಂದ 54 ಸಾವಿರ ಕೋಟಿ ರೂ. ನೀಡಿದೆ. ಸಾಲದ ರೂಪದಲ್ಲಿ 30 ಸಾವಿರ ಕೋಟಿ ರೂ. ನೀಡಿದೆ ಎಂದರು.
ಕೇಂದ್ರವು ಹೆಚ್ಚುವರಿಯಾಗಿ ಸಾಲ ತೆಗೆದುಕೊಳ್ಳಲು ಹೇಳಿದರೂ ನಾವು ತೆಗೆದುಕೊಂಡಿಲ್ಲ. ಯಾಕೆಂದರೆ ನಾವು ಇರುವ ಹಣದಲ್ಲಿ ರೊಟ್ಟಿ ತಿಂದು ಬದುಕುತ್ತೇವೆಯೇ ಹೊರತು ಸಾಲ ಮಾಡಿ ಹೋಳಿಗೆ ತಿನ್ನುವುದಿಲ್ಲ. ಅಭಿವೃದ್ಧಿ ಕಾರ್ಯಗಳಿಗೆ ನಮ್ಮ ಆದ್ಯತೆ ಎಂದವರು ತಿಳಿಸಿದರು.