ಬೆಂಗಳೂರು, ಮಾ 15 (DaijiworldNews/DB): ನ್ಯಾಯಾಲಯ ನೀಡಿರುವ ಆದೇಶವನ್ನು ಪಾಲನೆ ಮಾಡಬೇಕಾದುದು ನಮ್ಮೆಲ್ಲರ ಕರ್ತವ್ಯ. ಹದಗೆಟ್ಟಿರುವ ಶಿಕ್ಷಣ ವ್ಯವಸ್ಥೆಯನ್ನು ಸರಿ ಮಾಡಿ ಸರ್ಕಾರ ಮಕ್ಕಳಿಗೆ ಉತ್ತಮ ಭವಿಷ್ಯ ಕಲ್ಪಿಸಿಕೊಡಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಹಿಜಾಬ್ ವಿಚಾರಕ್ಕೆ ಸಂಬಂಧಿಸಿ ಹೈಕೋರ್ಟ್ ನೀಡಿದ ತೀರ್ಪಿನ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಿಜಾಬ್, ಕೇಸರಿ ಶಾಲು ಗಲಾಟೆಯಿಂದ ಶಾಂತಿ ಸುವ್ಯವಸ್ಥೆ ಹದಗೆಟ್ಟಿರುವ ಬಗ್ಗೆ ಮತ್ತು ಕಂಗೆಟ್ಟಿರುವ ಶಿಕ್ಷಣ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲು ನಾನು ಸೋಮವಾರ ಸದನದಲ್ಲಿ ನಿಲುವಳಿ ಸೂಚನೆ ಮಂಡಿಸಿದ್ದೆ. ಕಾಕತಾಳೀಯ ಎಂಬಂತೆ ಇಂದು ಹಿಜಾಬ್ ಬಗ್ಗೆ ಹೈಕೋರ್ಟ್ ತೀರ್ಪು ನೀಡಿದೆ. ತೀರ್ಪನ್ನು ಎಲ್ಲರೂ ಗೌರವಿಸಬೇಕು ಎಂದರು.
ಸಮವಸ್ತ್ರದ ಕಾರಣಕ್ಕೆ ಶಿಕ್ಷಣ ಸಂಸ್ಥೆಗಳಲ್ಲಿ ಅಹಿತಕರ ವಾತಾವರಣ ಸೃಷ್ಟಿಯಾಗಬಾರದು. ಇದನ್ನು ಸರಿದಾರಿಗೆ ತರುವ ಉದ್ದೇಶದಿಂದ ನಿಲುವಳಿ ಮಂಡಿಸಿದ್ದೇನೆ. ಸದನದಲ್ಲಿ ಈ ಬಗ್ಗೆ ನಾಳೆ ಮತ್ತೆ ಚರ್ಚೆ ಮಾಡುವುದಕ್ಕೆ ತೀರ್ಮಾನಿಸಿದ್ದು, ಸಭಾಧ್ಯಕ್ಷರು ಅವಕಾಶ ನೀಡುತ್ತಾರೆಂದು ನಂಬಿದ್ದೇನೆ ಎಂದು ಎಚ್ ಡಿಕೆ ತಿಳಿಸಿದರು.
ಹಿಂಸಾಚಾರ ಮತ್ತು ಗಲಾಟೆಗಳು ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತಿವೆ. ಇಂತಹವುಗಳು ಮರು ಕಳಿಸಬಾರದು. ಶಿಕ್ಷಣ ವ್ಯವಸ್ಥೆ ಸರಿಯಾಗಬೇಕು ಎಂದ ಅವರು, ಕಾನೂನು ಹದಗೆಟ್ಟಿರುವ ಬಗ್ಗೆಕಾಂಗ್ರೆಸ್ ನವರೂ ಸದನದಲ್ಲಿ ನಿಲುವಳಿ ಸೂಚನೆ ಮಂಡಿಸುತ್ತಾರೆ ಎಂಬ ಸುದ್ದಿಯನ್ನು ನೋಡಿದೆ. ಜನರು, ವಿದ್ಯಾರ್ಥಿಗಳ ಸಮಸ್ಯೆಗಳ ಬಗ್ಗೆ ಯಾರೇ ಚರ್ಚೆ ನಡೆಸಿದರೂ ನನ್ನ ತಕರಾರಿಲ್ಲ ಎಂದವರು ವಿವರಿಸಿದರು.